×
Ad

ಪಡುಪೆರಾರ್ ಗ್ರಾಪಂ; ಸ್ವಚ್ಛತೆಯ ವೇಳೆಯೇ ಕಸ ಎಸೆದ ಮಹಿಳೆಗೆ ದಂಡ

Update: 2022-03-15 21:41 IST

ಮಂಗಳೂರು : ಪಡುಪೆರಾರ ಗ್ರಾಪಂ ಅಧ್ಯಕ್ಷೆ ಅಮಿತಾ ಎಂ.ಶೆಟ್ಟಿ ಹಾಗೂ ಪಿಡಿಒ ಉಗ್ಗಪ್ಪಮೂಲ್ಯರ ನೇತೃತ್ವದಲ್ಲಿ ಮಂಗಳವಾರ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಮ್ಯದ ರಾಷ್ಟ್ರೀಯ ಸೇವಾ ಯೋಜನೆಯ (ಎನ್ನೆಸ್ಸೆಸ್) ಸುಮಾರು ೫೦ ವಿದ್ಯಾರ್ಥಿಗಳು ಗ್ರಾಪಂ ವ್ಯಾಪ್ತಿಯ ಕತ್ತಲ್ಸಾರ್ ಪಡೀಲ್ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಈ ಸಂದರ್ಭ ತ್ಯಾಜ್ಯ ತುಂಬಿದ್ದ ಪ್ಲಾಸ್ಟಿಕ್ ಬಕೆಟ್‌ನೊಂದಿಗೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಮಹಿಳೆ ರಸ್ತೆಗೆ ತ್ಯಾಜ್ಯ ಸುರಿದರು. ತಕ್ಷಣ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಪಿಡಿಒ ಉಗ್ಗಪ್ಪ ಮೂಲ್ಯ, ಸ್ಥಳದಲ್ಲೇ ಆಕೆಗೆ ೨,೦೦೦ ರೂ ದಂಡ ವಿಧಿಸಿ ಕಸ ಹೆಕ್ಕಿಸಿದರು.

ಮೂರು ತಿಂಗಳ ಹಿಂದೆಯಷ್ಟೇ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ೧ ಸಾವಿರ ರೂ. ದಂಡ ವಿಧಿಸಿದ್ದ ಪಿಡಿಒ ಇದೀಗ ಎರಡನೆ ಬಾರಿ ದಂಡ ವಿಧಿಸಿದ್ದಾರೆ.

ಮಂಗಳವಾರ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಈಗಾಗಲೇ ಹಲವು ಬಾರಿ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಸಂಗ್ರಹಿಸಲಾದ ಲೋಡ್‌ಗಟ್ಟಲೆ ತ್ಯಾಜ್ಯವನ್ನು ದಂಪಿಂಗ್ ಯಾರ್ಡ್‌ಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ.

ಮಂಗಳವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಗ್ರಾಪಂ ಸದಸ್ಯರಾದ ಸೀತಾರಾಮ, ಅರುಣ್ ಕೋಟ್ಯಾನ್, ಗ್ರಂಥಾಲಯ ಮೇಲ್ವಿಚಾರಕ ಭರತ್ ಕುಮಾರ್ ವಿ, ಮೂಡುಪೆರಾರ ಶಕ್ತಿ ಕೇಂದ್ರದ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಸುಂಕದಕಟ್ಟೆ ಕಾಲೇಜಿನ ಪ್ರಾಧ್ಯಾಪಕರಾದ ವಿಶ್ವನಾಥ ಪೂಜಾರಿ, ಕಮಲಾಕ್ಷಿ, ರೇಷ್ಮಾ, ಚೇತನಾ, ಸಂಘ-ಸಂಸ್ಥೆಯ ಸಕ್ರಿಯ ಸದಸ್ಯರಾದ ಸುಧಾಕರ ಕೊಲಪಿಲ, ದೇವದಾಸ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News