ಬಿಎಂಟಿಸಿಗೆ 200 ಕೋಟಿ ರೂ. ವಿಶೇಷ ಅನುದಾನ ನೀಡಿದ ರಾಜ್ಯ ಸರಕಾರ

Update: 2022-03-15 16:53 GMT

ಬೆಂಗಳೂರು, ಮಾ.15: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಸರಕಾರವನ್ನು ಆರ್ಥಿಕ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪುರಸ್ಕರಿಸಿದ ಸರಕಾರವು 200 ಕೋಟಿ. ರೂ. ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. 

ಮಂಗಳವಾರದಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಮೃತ ನೌಕರರ ಅವಲಂಬಿತರಿಗೆ ಹಾಗೂ ನಿವೃತ್ತ ನೌಕರರಿಗೆ ಧನಾದೇಶ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರಕಾರವು ವಿಶೇಷ ಅನುದಾನವನ್ನು ನೀಡಿದ ಕಾರಣ, ಮೃತರ ಅವಲಂಬಿತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿದೆ. ಇದೇ ರೀತಿ ಒಟ್ಟು 559 ಪ್ರಕರಣಗಳಲ್ಲಿ ಒಟ್ಟಾರೆಯಾಗಿ 94 ಕೋಟಿ ರೂ.ಗಳ ಅಂತಿಮ ಆರ್ಥಿಕ ಸೌಲಭ್ಯ ವಿತರಣೆ ಮಾಡಲಾಗುವುದು ಎಂದರು. 

ಸಂಸ್ಥೆಯ ಅಧ್ಯಕ್ಷ ನಂದೀಶ್ ರೆಡ್ಡಿ ಮಾತನಾಡಿ, ಕೋವಿಡ್‍ನಿಂದಾಗಿ ಸಂಸ್ಥೆಯ ಆದಾಯ 6 ಕೋಟಿ ರೂ.ಗಳಿಂದ 3 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಇದರಿಂದ ದೈನಂದಿನ ಖರ್ಚುಗಳನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂದರು. 

ಕಾರ್ಯಕ್ರಮದಲ್ಲಿ ಮೊದಲ ಹಂತದ 118 ಮೃತ ನೌಕರರ ಅವಲಂಬಿತರಿಗೆ ಹಾಗೂ 138 ನಿವೃತ್ತ ನೌಕರರಿಗೆ ಧನಾದೇಶವನ್ನು ನೀಡಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್, ನಿರ್ದೇಶಕಿ ರಾಧಿಕಾ ಜಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News