ಹಿಂದೂ ಶ್ರೇಷ್ಠತೆಯಲ್ಲಿ ನಂಬಿದ ಗುಂಪುಗಳ ಒತ್ತಡಕ್ಕೆ ನ್ಯಾಯಾಲಯ ಮಣಿದಿದೆ: ಸಿಪಿಐ(ಎಂಎಲ್) ಲಿಬರೇಶನ್ ಕಳವಳ

Update: 2022-03-15 17:06 GMT

ಬೆಂಗಳೂರು, ಮಾ.15: ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮುಸಲ್ಮಾನ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಧರಿಸುವ ಹಿಜಾಬ್‍ಗೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ಮಂಗಳವಾರ ನೀಡಿರುವ ತೀರ್ಪಿನ ಕುರಿತು ಸಿಪಿಐ(ಎಂಎಲ್) ಲಿಬರೇಶನ್ ಕಳವಳವನ್ನು ವ್ಯಕ್ತಪಡಿಸುತ್ತದೆ.  

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕಿನ ಬಗ್ಗೆ ಹಾಗೂ ರಾಜ್ಯ ಸರಕಾರ ಮತ್ತು ಶಾಲಾ-ಕಾಲೇಜು ಅಧಿಕಾರಿಗಳ ಸ್ವೇಚ್ಛಾನುಸಾರ ಮತ್ತು ತಾರತಮ್ಯ ಪ್ರೇರಿತ ಆದೇಶದ ಅಥವಾ ನಿಯಮಗಳ ವಿರುದ್ಧ ಯಾವುದೇ ರೀತಿಯ ರಕ್ಷಣೆಯನ್ನು ಉಚ್ಚ ನ್ಯಾಯಾಲಯದ ತೀರ್ಪು ನೀಡಿರುವುದಿಲ್ಲ. ಹಿಂದೂ ಶ್ರೇಷ್ಠತೆಯಲ್ಲಿ ನಂಬಿದ ಗುಂಪುಗಳ ಒತ್ತಡಕ್ಕೆ ನ್ಯಾಯಾಲಯ ಮಣಿದಿರುವುದು ಈ ತೀರ್ಪಿನಲ್ಲಿ ಕಂಡುಬರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪಿನಿಂದ ಪ್ರೇರಣೆ ಹೊಂದಿದ್ದ ಹಿಂದೂ ಶ್ರೇಷ್ಠತೆಯಲ್ಲಿ ನಂಬಿದ ಗುಂಪುಗಳು ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಮುಸಲ್ಮಾನ ಸಮುದಾಯದ ಹುಡುಗಿಯರು ಮತ್ತು ಮಹಿಳೆಯರು ತಮ್ಮ ಹಿಜಾಬ್‍ಗಳನ್ನು ಕಳಚಿಹಾಕುವಂತೆ ಒತ್ತಾಯವನ್ನು ಎಸಗುತ್ತಿದ್ದಾರೆ. ಮುಸಲ್ಮಾನ ವಿದ್ಯಾರ್ಥಿನಿಯರು ಈಗಾಗಲೇ ತಮ್ಮ ಪರೀಕ್ಷೆಗಳನ್ನು ಬರೆಯಲು ಅಸಾಧ್ಯವಾಗಿದ್ದು, ಅವರು ಒಂದು ವರ್ಷದ ಶಿಕ್ಷಣವನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ವಿದ್ಯಾರ್ಥಿನಿಯರು ಮಾತ್ರವಲ್ಲದೆ ಹಿಜಾಬ್ ಧರಿಸಿರುವ ಶಿಕ್ಷಕರನ್ನೂ ಅವಮಾನಕ್ಕೆ ಈಡು ಮಾಡಿ ಸಾರ್ವಜನಿಕವಾಗಿ ತಮ್ಮ ಹಿಜಾಬ್ ಕಳಚಲು ಒತ್ತಾಯ ಮಾಡಲಾಗಿದೆ. ನೊಂದ ಮುಸಲ್ಮಾನ ಮಹಿಳೆಯರು ಅನುಭವಿಸಿದ ಕಿರುಕುಳ ಮತ್ತು ತಾರತಮ್ಯಗಳನ್ನು ಪರಿಗಣಿಸಿ ಅವರಿಗೆ ಪರಿಹಾರ ಒದಗಿಸಬಹುದಾದ ನ್ಯಾಯಾಲಯವು, ಅವರ ಅವಮಾನ ಮತ್ತು ಹಕ್ಕುಗಳ ಉಲ್ಲಂಘನೆಯನ್ನು ಎತ್ತಿಹಿಡಿದು ತಮ್ಮ ಇಂದಿನ ತೀರ್ಪಿನ ಮುಖಾಂತರ ಮುಸಲ್ಮಾನರನ್ನು ದಮನಿಸಬೇಕು ಎಂದು ಹೊರಟ ಪಡೆಗಳ ಕೈಗೆ ಅಸ್ತ್ರವನ್ನು ನೀಡಿದ್ದಾರೆ ಎಂದು ಆರೋಪಿಸಿದೆ.

ಮೇಲ್ಮನವಿಯ ಮುಖಾಂತರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿ ಕರ್ನಾಟಕ ಉಚ್ಚನ್ಯಾಯಾಲಯದ ತೀರ್ಪನ್ನು ವಜಾಮಾಡುವ ಅವಕಾಶವಿದೆ. ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಕಾಣದೆ ಅವರು ಅನುಭವಿಸುವ ಕಿರುಕುಳ ಮತ್ತು ದಬ್ಬಾಳಿಕೆಯನ್ನು ತಡೆಹಿಡಿಯಬೇಕು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News