ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಆಗ್ರಹಿಸಿ ಜಲ ಮಂಡಳಿ ಕಾರ್ಮಿಕರ ಧರಣಿ
ಬೆಂಗಳೂರು, ಮಾ. 16: ‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುವ ಗುತ್ತಿಗೆ ಕಾರ್ಮಿಕರ ಮೇಲೆ ಅಲ್ಲಿನ ಅಧಿಕಾರಿಗಳ ಶೋಷಣೆ ಮತ್ತು ದೌರ್ಜನ್ಯ' ಖಂಡಿಸಿ, ಕಾರ್ಮಿಕರ ‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಆಗ್ರಹಿಸಿ' ಇಲ್ಲಿನ ಕಾವೇರಿ ಭವನದಲ್ಲಿನ ಜಲಮಂಡಳಿ ಕಚೇರಿ ಮುಂಭಾಗದಲ್ಲಿ ಬಿಡಬ್ಲ್ಯೂಎಸ್‍ಎಸ್‍ಬಿ ಗುತ್ತಿಗೆ ಕಾರ್ಮಿಕರ ಸಂಘದಿಂದ ಧರಣಿ ನಡೆಸಲಾಯಿತು.
ಬುಧವಾರ ಸಂಘದ ಅಧ್ಯಕ್ಷ ಹಾಗೂ ವಕೀಲ ಬಾಲನ್ ನೇತೃತ್ವದಲ್ಲಿ ಜಲ ಮಂಡಳಿಯ ವಾಲ್ ಮ್ಯಾನ್, ಡ್ರೈವರ್, ಗಾರ್ಡನಿಂಗ್, ವಾಟರ್ ಮ್ಯಾನ್, ಸ್ಯಾನಿಟರಿ ವರ್ಕರ್ಸ್, ಎಟಿಎಂ ಆಪರೇಟರ್, ಟೆಲಿಫೋನ್ ಆಪರೇಟರ್, ಪಂಪ್ ಹೌಸ್ ಆಪರೇಟರ್, ಹೇಲ್ಪರ್‍ಗಳ ಸೇರಿದಂತೆ ನೂರಾರು ಕಾರ್ಮಿಕರು, ಅಧಿಕಾರಿಗಳ ಕಿರುಕುಳ, ದೌರ್ಜನ್ಯದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಕೀಲ ಬಾಲನ್, ಜಲ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುವ ಗುತ್ತಿಗೆ ಕಾರ್ಮಿಕರ ಮೇಲಿನ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ. ಕಾರ್ಮಿಕರಿಗೆ ವಾರದ ರಜೆ ಮತ್ತು ಸರಕಾರಿ ರಜೆ ಕಡ್ಡಾಯಗೊಳಿಸಬೇಕು. ದಿನಕ್ಕೆ 8ಗಂಟೆ ಕೆಲಸದ ಅವಧಿ ನಿಗದಿಪಡಿಸಬೇಕು. ಓಟಿ ಭತ್ತೆ ನೀಡಬೇಕು. ಬಿಬಿಎಂಪಿ ಮಾದರಿಯಲ್ಲೇ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿ ಮಾಡಬೇಕು. ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು.
ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಬೋನಸ್ ಹಾಗೂ ಉದ್ಯೋಗ ಭದ್ರತೆ ಕಲ್ಪಿಸಬೇಕು. ಆಡಳಿತ ವರ್ಗ ಕಾರ್ಮಿಕರೊಂದಿಗೆ ಘನತೆ ಮತ್ತು ಗೌರವದಿಂದ ವರ್ತಿಸಬೇಕು. ಮೇಲ್ಕಂಡ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಬೇಕು. ಇನ್ನೂ ಹದಿನೈದು ದಿನಗಳ ಒಳಗಾಗಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಟ ಚೇತನ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ದರು. ಮುಖಂಡ ರವಿ ಮೋಹನ್, ವಕೀಲ ಹರಿರಾಮ್, ಜನಶಕ್ತಿ ಸಂಘಟನೆ ಗೌರಿ ಸೇರಿದಂತೆ ಜಲ ಮಂಡಳಿಯ ಕಾರ್ಮಿಕರು ಪಾಲ್ಗೊಂಡಿದ್ದರು. ಆ ಬಳಿಕ ಜಲ ಮಂಡಳಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆಂದು ಮುಖಂಡರು ತಿಳಿಸಿದ್ದಾರೆ.