ಅರ್ಹತೆಯಿಲ್ಲದಿದ್ದರೂ ಐಐಎಂ-ರೋಹ್ಟಕ್ ನ ಮುಖ್ಯಸ್ಥರಾಗಿ ಧೀರಜ್ ಶರ್ಮಾ ನೇಮಕ‌ !

Update: 2022-03-17 14:17 GMT

ಹೊಸದಿಲ್ಲಿ,ಮಾ.17: ಕನಿಷ್ಠ ಶೈಕ್ಷಣಿಕ ಅರ್ಹತೆಯ ಮಾನದಂಡವನ್ನು ಪೂರೈಸಿರದಿದ್ದರೂ ಧೀರಜ ಶರ್ಮಾರನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ)-ರೋಹ್ಟಕ್ನ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದ್ದನ್ನು ಮತ್ತು ಎರಡನೇ ಅವಧಿಗೂ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿರುವುದನ್ನು ಕೇಂದ್ರ ಸರಕಾರವು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಒಪ್ಪಿಕೊಂಡಿದೆ. ಐಐಎಂ ಮುಖ್ಯಸ್ಥರಾಗಿ ನೇಮಕಗೊಳ್ಳಲು ಪದವಿ ಪರೀಕ್ಷೆಯಲ್ಲಿ ಮೊದಲ ದರ್ಜೆಯನ್ನು ಪಡೆದಿರುವುದು ಅಗತ್ಯವಾಗಿದ್ದರೂ ಶರ್ಮಾ ಎರಡನೇ ದರ್ಜೆಯನ್ನು ಪಡೆದಿದ್ದರು ಎನ್ನುವುದನ್ನು ಸರಕಾರವು ಅಫಿಡವಿಟ್ನಲ್ಲಿ ಒಪ್ಪಿಕೊಂಡಿದೆ ಎಂದು ಶರ್ಮಾ ನೇಮಕದಲ್ಲಿ ಅಕ್ರಮವನ್ನು ಮೊದಲ ಬಾರಿಗೆ ವರದಿ ಮಾಡಿದ್ದ ಇಂಡಿಯನ್ ಎಕ್ಸಪ್ರೆಸ್ ತನ್ನ ವರದಿಯಲ್ಲಿ ತಿಳಿಸಿದೆ.

ಐಐಎಂ-ರೋಹ್ಟಕ್ನ ಮುಖ್ಯಸ್ಥರಾಗಿ ಶರ್ಮಾರ ನೇಮಕ ಮತ್ತು ಎರಡನೇ ಅವಧಿಗೂ ಅವರ ಮುಂದುವರಿಕೆಯನ್ನು ಆರ್ಟಿಐ ಕಾರ್ಯಕರ್ತ ಅಮಿತಾವ್ ಚೌಧುರಿ ಅವರು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

ಶರ್ಮಾರ ಪದವಿ ಶಿಕ್ಷಣದ ಪ್ರಮಾಣಪತ್ರಗಳನ್ನು ಕೋರಿ ಅವರಿಗೆ ಮೂರು ಪತ್ರಗಳನ್ನು ರವಾನಿಸಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ 2021,ಸೆಪ್ಟಂಬರ್ನಲ್ಲಿ ವರದಿ ಮಾಡಿತ್ತು. ಶರ್ಮಾ ಇನ್ನೂ ಈ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಿಲ್ಲ,ಆದಾಗ್ಯೂ ಅವರನ್ನು ಎರಡನೇ ಅವಧಿಗೆ ಮರುನೇಮಕ ಮಾಡಲಾಗಿದೆ.

2018ರ ಐಐಎಂ ಕಾಯ್ದೆಯು ಆಡಳಿತ ಮಂಡಳಿಗೆ ನಿರ್ದೇಶಕರು, ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಗೊಳಿಸಲು 20 ಐಐಎಂಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡಿದೆ. ಈ ವರ್ಷದ ಫೆ.28ರಂದು ಶರ್ಮಾರನ್ನು ಈ ಕಾಯ್ದೆಯಡಿ ಮರುನೇಮಕ ಮಾಡಲಾಗಿದೆ. 2017ರಲ್ಲಿ ಪ್ರಧಾನಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿಯು ಶರ್ಮಾರನ್ನು ಮೊದಲ ಬಾರಿಗೆ ನೇಮಕಗೊಳಿಸಿತ್ತು. ಈ ನೇಮಕವನ್ನು ಅಸಿಂಧುವೆಂದು ಪರಿಗಣಿಸುವುದಾಗಿ ಈಗ ಶಿಕ್ಷಣ ಸಚಿವಾಲಯವು ಅಫಿಡವಿಟ್ನಲ್ಲಿ ಒಪ್ಪಿಕೊಂಡಿದೆ.

 ಐಐಂ-ರೋಹ್ಟಕ್ನ ಮುಖ್ಯಸ್ಥ ಹುದ್ದೆಗೆ ಶರ್ಮಾ ಅರ್ಹರಾಗಿದ್ದಾರೆ ಎಂದು ಪದೇಪದೇ ಪ್ರತಿಪಾದಿಸಿದ ಬಳಿಕವಷ್ಟೇ ಸರಕಾರವು ಅವರು ಅನರ್ಹರಾಗಿದ್ದರು ಎನ್ನುವುದನ್ನು ಒಪ್ಪಿಕೊಂಡಿದೆ ಎಂದು ತಿಳಿಸಿರುವ ವರದಿಯು,ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 60 ಜನರ ಪೈಕಿ ಒಬ್ಬರೂ ನೇಮಕವನ್ನು ಪ್ರಶ್ನಿಸಿಲ್ಲ,ಹೀಗಾಗಿ ಅರ್ಜಿದಾರರಿಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ಅಧಿಕಾರವಿಲ್ಲ,ಆದ್ದರಿಂದ ಅದನ್ನು ವಜಾಗೊಳಿಸಬೇಕು ಎಂದೂ ಸರಕಾರವು ಒಂದು ವರ್ಷದ ಹಿಂದೆ ನ್ಯಾಯಾಲಯವನ್ನು ಆಗ್ರಹಿಸಿತ್ತು ಎಂದು ಬೆಟ್ಟು ಮಾಡಿದೆ. ಸರಕಾರವು ಶರ್ಮಾರ ಪದವಿ ಶಿಕ್ಷಣ ದಾಖಲೆಗಳನ್ನು ಪಡೆಯಲು ಪ್ರಯತ್ನಿಸುತ್ತಿತ್ತಾದರೂ ಅದು ತನ್ನ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿತ್ತು ಎಂದು ವರದಿಯು ತಿಳಿಸಿದೆ.

ಶಿಕ್ಷಣ ಸಚಿವಾಲಯವು ತನಗೆ ಕಳುಹಿಸಿದ್ದ ಮೂರು ಪತ್ರಗಳಿಗೆ ಉತ್ತರಿಸುವ ಗೋಜಿಗೆ ಹೋಗಿರದಿದ್ದ ಶರ್ಮಾ,1997ರಲ್ಲಿ ತಾನು ದಿಲ್ಲಿ ವಿವಿಯಿಂದ ಪದವಿಯನ್ನು,1999ರಲ್ಲಿ ಬಿ.ಆರ್.ಅಂಬೇಡ್ಕರ್ ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಮತ್ತು 2006ರಲ್ಲಿ ಲೂಸಿಯಾನಾ ಟೆಕ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪಡೆದಿದ್ದೇನೆ ಮತ್ತು ಏಳು ವರ್ಷಗಳ ಕಾಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಪೂರ್ಣ ಕಾಲಿಕ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸುವ ನೋಟರಿಯಿಂದ ದೃಢೀಕೃತ ಅಫಿಡವಿಟ್ ಅನ್ನು ಸಲ್ಲಿಸುವುದಾಗಿ ತಿಳಿಸಿ ಈ ವರ್ಷದ ಫೆಬ್ರವರಿಯಲ್ಲಿ ಸರಕಾರಕ್ಕೆ ಪತ್ರವನ್ನು ಬರೆದಿದ್ದರು.

ಶರ್ಮಾರನ್ನು ಹೇಗೆ ನೇಮಕಗೊಳಿಸಲಾಗಿತ್ತು ಮತ್ತು ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ತಾನು ಈಗ ವಿಚಾರಣೆ ನಡೆಸುತ್ತಿದ್ದೇನೆ ಎಂದು ಸರಕಾರವು ಹೇಳಿದೆ.
 
ಐಐಎಂ-ರೋಹ್ಟಕ್ನ ವೆಬ್ಸೈಟ್ನಂತೆ ಉದ್ಯಮ ಕ್ಷೇತ್ರದಲ್ಲಿ ‘ಸಂಬಂಧಗಳು’ ಶರ್ಮಾರ ಮುಖ್ಯ ಸಂಶೋಧನಾ ಆಸಕ್ತಿಗಳಾಗಿವೆ. ಐಐಎಂ-ರೋಹ್ಟಕ್ ನಿರ್ದೇಶಕರಾಗಿ ತನ್ನ ಅಧಿಕಾರಾವಧಿಯಲ್ಲಿ ಅವರು ಹಲವಾರು ಅಧ್ಯಯನಗಳ ಸಹಲೇಖಕರಾಗಿದ್ದರು. 2020 ಮಾರ್ಚ್ನಲ್ಲಿ ದಿಲ್ಲಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾಅತ್ ಸಮ್ಮೇಳನವು ಕೊರೋನ ವೈರಸ್ ಪ್ರಕರಣಗಳನ್ನು ಅತಿಯಾಗಿ ಉಲ್ಬಣಿಸಲಿದೆ ಎಂದು ಭವಿಷ್ಯ ನುಡಿದಿದ್ದ ಅಧ್ಯಯನವು ಇವುಗಳಲ್ಲಿ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News