ಕ್ಯಾಂಪಸ್ ಬಳಿ ಅಕ್ರಮ ಗಣಿಗಾರಿಕೆ, ಪರಿಸರ ಮಾಲಿನ್ಯ ಆರೋಪ: ಬಿಐಟಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2022-03-18 07:24 GMT

ಕೊಣಾಜೆ, ಮಾ.18: ಇನೋಳಿಯ ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್‍ ಟೆಕ್ನಾಲಜಿ (ಬಿಐಟಿ) ಬಳಿ ಅಕ್ರಮ ಗಣಿಗಾರಿಕೆ ಹಾಗೂ ಪರಿಸರ ಮಾಲಿನ್ಯ ಚಟುವಟಿಕೆಗಳು ನಡೆಯುತ್ತಿದೆ ಎಂದು ಆರೋಪಿಸಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಶುಕ್ರವಾರ ಕ್ಯಾಂಪಸ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.

    ಬ್ಯಾರೀಸ್ ಕ್ಯಾಂಪಸ್ ಒಳಗಿಂದ ಮುಖ್ಯದ್ವಾರದ ವರೆಗೆ ಪ್ರತಿಭಟನಾ‌ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ  ಪರಿಸರ ಮಾಲಿನ್ಯದ ವಿರುದ್ದ ಘೋಷಣೆಗಳನ್ನು ಕೂಗಿದರು.

 ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬ್ಯಾರೀಸ್ ಎನ್ವಿರೋ ಆರ್ಕಿಟಕ್ಚರ್ ಡಿಸೈನ್ ಸ್ಕೂಲ್ ಪ್ರಾಂಶುಪಾಲ ಎ.ಆರ್.ಅಶೋಕ್ ಮೆಂಡೋನ್ಸಾ, ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಿದೆ. ನಾವು ಗಣಿಗಾರಿಕೆ ವಿರೋಧಿಗಳಲ್ಲ. ಆದರೆ ಜವಾಬ್ದಾರಿಯುತವಾಗಿ ನಡೆಯಬೇಕು. ಇಲ್ಲಿ ಬ್ಯಾರೀಸ್ ಕಾಲೇಜಿನ ಬಳಿ ಕೃಷಿಗೆಂದು ಪರವಾನಿಗೆ ಪಡೆದು ಮೂವತ್ತು ಅಡಿ ಆಳದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಕ್ಯಾಂಪಸ್ ನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಹೊಂಡದಲ್ಲಿ ನೀರು ತುಂಬಿ ಹಲವಾರು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಅದಕ್ಕೂ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ.ಮಂಜೂರ್ ಬಾಷಾ ಮಾತನಾಡಿ, ಬಿಐಟಿ ಬಳಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯಗಳು ಉಂಟಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗುತ್ತಿವೆ. ಅಲ್ಲದೆ ಸುಮಾರು ರಾತ್ರಿ ಏಳು ಗಂಟೆಯವರೆಗೂ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಈ ಪರಿಸರ ಮಾಲಿನ್ಯದ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ನೀಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಡಾ.ಅಝೀಝ್ ಮುಸ್ತಫ, ಬಿಐಟಿ ಪ್ರಾಧ್ಯಾಪಕ ಅಬ್ದುಲ್ಲಾ ಗುಬ್ಬಿ ಮೊದಲಾದವರು ಉಪಸ್ಥಿತರಿದ್ದರು.


ಮೊದಲು ಕೋವಿಡ್ ನಿಂದಾಗಿ ನಮ್ಮ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗಿತ್ತು. ಇದೀಗ ಕ್ಯಾಂಪಸ್ ಬಳಿ ಗಣಿಗಾರಿಕೆಯಿಂದ  ನಮಗೆ ತೊಂದರೆಯಾಗುತ್ತಿದೆ. ನಮಗೆ ಆರೋಗ್ಯಕ್ಕೂ ಸಮಸ್ಯೆ ಆಗುತ್ತಿದ್ದು, ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು.

-ಮುಹಮ್ಮದ್ ರಾಝಿಕ್

ಬಿಐಟಿ ವಿದ್ಯಾರ್ಥಿ


ಗಣಿಗಾರಿಕೆಯಿಂದ ಶಬ್ದಮಾಲಿನ್ಯ ಉಂಟಾಗಿ ಪಾಠ ಕೇಳುವುದಕ್ಕೂ ಆಗ್ತಾ ಇಲ್ಲ. ನಾವು ಶಾಂತ ರೀತಿಯಲ್ಲಿ ಮನವಿ ಮಾಡಿದರೂ ಅದಕ್ಕೆ ಬೆಲೆ ಸಿಕ್ಕಿಲ್ಲ. ದಯವಿಟ್ಟು ನಮ್ಮ ಶಿಕ್ಷಣವನ್ನು ಸರಿಯಾಗಿ ನಡೆಸಲು ಅವಕಾಶ ಕೊಡಿ. ಗಣಿಗಾರಿಕೆಯಿಂದ ಕೆಲವರಿಗೆ ಉದ್ಯೋಗ ಸಿಗುತ್ತದೇನೋ ನಿಜ. ಆದರೆ ಈ ಸಂಸ್ಥೆ ಸಾವಿರಾರು ಉದ್ಯೋಗಿಗಳನ್ನು ಸೃಷ್ಟಿಸುತ್ತಿದೆ.

-ಯಾಸೀನ್, ಬಿಐಟಿ ವಿದ್ಯಾರ್ಥಿ


ಪರಿಸರ ಮಾಲಿನ್ಯ ದೂರಗೊಳಿಸಲು ಏನಾದರೂ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ. ಇಂತಹ ಶಬ್ದಮಾಲಿನ್ಯ ದಂತಹ ಸಮಸ್ಯೆಯಿಂದ ಓದಿಗೆ ತೊಂದರೆ ಆಗುತ್ತಿದೆ.

-ಗೀತಾ, ಬಿಐಟಿ ವಿದ್ಯಾರ್ಥಿನಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News