×
Ad

ಬೆಂಗಳೂರು: ಪ್ರೇಯಸಿಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಯುವಕ; ಆರೋಪ

Update: 2022-03-18 22:10 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.18: ಯುವಕನೋರ್ವ ತನ್ನ ಪ್ರೇಯಸಿ ಮೇಲೆ ಪೆಟ್ರೋಲ್ ಸುರಿದು ಕೊಲೆಗೈದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾದಾಮಿ ಮೂಲದ ಶಿವಕುಮಾರ್ ಈ ಕೃತ್ಯವೆಸಗಿರುವ ಆರೋಪ ಕೇಳಿಬಂದಿದೆ. ದಾನೇಶ್ವರಿ ಎಂಬ ಯುವತಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.

ಯುವತಿ ದಾನೇಶ್ವರಿ ಮತ್ತು ಶಿವಕುಮಾರ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮದುವೆಯ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆದಿದೆ. ಎರಡು ದಿನದ ಹಿಂದೆ ಶಿವಕುಮಾರ್ ಕೆಲಸ ಮಾಡುವ ನಗರದ ವೀರಸಂದ್ರದ ಕಂಪೆನಿಯ ಬಳಿ ದಾನೇಶ್ವರಿ ಬಂದಿದ್ದು, ಜಗಳ ನಡೆದಿದೆ. ಆ ಸಮಯದಲ್ಲಿ ಬಾಟಲ್‍ನಲ್ಲಿ ಪೆಟ್ರೋಲ್ ತಂದ ಯುವಕ, ದಾನೇಶ್ವರಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗುತ್ತಿದೆ.

ಬಳಿಕ ದಾನೇಶ್ವರಿಯನ್ನು ಶಿವಕುಮಾರ್‍ನೇ ಖಾಸಗಿ ಆಸ್ಪತ್ರೆಗೆ ದಾಖಲಿದ್ದಾನೆ. ಆದರೆ, ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಯುವತಿಯ ತಂದೆ, ನಾವು ಮಗಳ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾಗ ಆಕೆ ತಾನು ಪ್ರೀತಿಸುವ ವಿಷಯವನ್ನು ತಿಳಿಸಿದ್ದಳು. ಶಿವಕುಮಾರ್ ಹಾಗೂ ದಾನೇಶ್ವರಿ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಪ್ರೀತಿಸಿದ್ದಾರೆ. ಶಿವಕುಮಾರ್ ನನ್ನೇ ಮದುವೆಯಾಗುತ್ತೇನೆ, ಆದರೆ, ಆತ ಒಪ್ಪುತ್ತಿಲ್ಲ ಎಂದು ತಮಗೆ ಹೇಳಿದ್ದಳು ಎಂದರು.

ಮದುವೆಯಾಗಲು ಕೇಳಿದಾಗ ಶಿವಕುಮಾರ್, ನಮ್ಮಿಬ್ಬರದು ಬೇರೆ ಬೇರೆ ಜಾತಿಯಾಗಿದ್ದು, ನಿನ್ನನ್ನು ಮದುವೆಯಾದರೆ ನನ್ನ ತಂದೆ-ತಾಯಿ ಮನೆಗೆ ಸೇರಿಸುವುದಿಲ್ಲ ಎಂದಿದ್ದ. ಪುತ್ರಿ ದಾನೇಶ್ವರಿ, ಬಿಟಿಎಂ ಲೇಔಟ್‍ನಲ್ಲಿನ ಪಿಜಿಯಲ್ಲಿದ್ದುಕೊಂಡು ಕೋರ್ಸ್ ಮಾಡುತ್ತಿದ್ದಳು. ಮಾ.16ರಂದು ಘಟನೆ ಬಗ್ಗೆ ನಮಗೆ ಮಾಹಿತಿ ತಿಳಿದಿದ್ದು, ಬಳಿಕ ಆಸ್ಪತ್ರೆಗೆ ಹಣ ಕಳುಹಿಸಿ, ಚಿಕಿತ್ಸೆ ನೀಡುವುದಕ್ಕೆ ವೈದ್ಯರಿಗೆ ಹೇಳಿದ್ದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News