ಬಹು ವಿಧದ ಬಡತನ ನಿವಾರಣೆಯಾಗಬೇಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-03-18 17:55 GMT

ಬೆಂಗಳೂರು, ಮಾ.18: ನಮ್ಮ ದೇಶದಲ್ಲಿ ಆರ್ಥಿಕ ಬಡತನವೊಂದೇ ಅಲ್ಲ, ಬಹು ವಿಧದ ಬಡತನ ನಿವಾರಣೆಯಾಗಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಇಂದು ದಿ/ನಡ್ಜ್ ಫೌಂಡೇಷನ್ ನ ದಿ/ ನಡ್ಜ್ ಇನ್ಸ್ಟಿಟ್ಯೂಟ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅರಿವಿನ ಕೊರತೆ, ಸಾಮಾಜಿಕ ಅನಿಷ್ಟಗಳೂ ಬಡತನವೇ ಎಂದು ಅವರು ನುಡಿದರು.

ಆದ್ದರಿಂದ ಬಡತನ ನಿವಾರಣೆಯನ್ನು ಬಹು ಆಯಾಮಗಳಲ್ಲಿ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಸಮಾಜದಲ್ಲಿ ಉನ್ನತಿಯನ್ನು ಸಾಧಿಸಿದ ಪ್ರತಿಯೊಬ್ಬರು, ಸಮಾಜಕ್ಕೆ ತಮ್ಮ ಕೊಡುಗೆ ನೀಡುವ ಅಗತ್ಯವಿದೆ. ಆಗ ಅವಕಾಶ ವಂಚಿತರಾದ ಇನ್ನಷ್ಟು ಜನರ ಉನ್ನತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದಿ ನಡ್ಜ್ ಫೌಂಡೇಷನ್ ವಿವಿಧ ಕಾರ್ಪೊರೇಟ್ ಕಂಪೆನಿಗಳ ಸಹಯೋಗದೊಂದಿಗೆ ಬಡತನ ನಿವಾರಣೆ, ಗ್ರಾಮೀಣಾಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ, ಐಟಿ ಬಿಟಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯ ಸರ್ಕಾರವು ಯುವಕರು ಹಾಗೂ ಮಹಿಳೆಯರ ಉದ್ಯಮಶೀಲತೆ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ದಿ ನಡ್ಜ್ ಫೌಂಡೇಷನ್ ಮುಖ್ಯಸ್ಥ ಅತುಲ್ ಸತೀಜ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News