ಬೆಂಗಳೂರು: 30 ದಿನಗಳಿಂದ ಅತಿಥಿ ಉಪನ್ಯಾಸಕರ ಅಹೋರಾತ್ರಿ ಧರಣಿ, ಇಂದಿನಿಂದ ಉಪವಾಸ ಸತ್ಯಾಗ್ರಹ

Update: 2022-03-18 17:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.18: ಅತಿಥಿ ಉಪನ್ಯಾಸಕರ ಕಾನೂನುಬದ್ದ ಬೇಡಿಕೆಗಳ ಈಡೇರಿಕೆಗಾಗಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕಳೆದ ಮೂವ್ವತ್ತು ದಿನಗಳಿಂದ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದ್ದು, ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ವಿಫಲವಾದ ಕಾರಣ ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 

ಶುಕ್ರವಾರ ಫ್ರೀಡಂ ಪಾರ್ಕ್‍ನಲ್ಲಿ ಸುದ್ದಿಗಾರರೊಂದಿಗೆ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಮುಖಂಡ ನಾಗಣ್ಣ ಮಾತನಾಡಿ, ಸರಕಾರದ ಅವೈಜ್ಞಾನಿಕ ನೀತಿಯಿಂದಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇತಿಹಾಸದಲ್ಲೇ ಯಾವ ಸರಕಾರವು ಮಾಡಿರದ ಸಾಧನೆಯನ್ನು ನಾವು ಮಾಡುತ್ತೇವೆ ಎಂದು ಅನುಷ್ಠಾನಗೊಳಿಸಿದ ಅವೈಜ್ಞಾನಿಕ ನೀತಿಯಿಂದಾಗಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಅತಿಥಿ ಉಪನ್ಯಾಸಕರು ಸಂಬಳವನ್ನು ಹೆಚ್ಚಿಸಿ ಎಂದು ಕೇಳಿದ ತಪ್ಪಿಗಾಗಿ ಅರ್ಧ ಸಂಖ್ಯೆಯಷ್ಟು ಅತಿಥಿ ಉಪನ್ಯಾಸಕರ ಕೆಲಸವನ್ನು ಕಿತ್ತುಕೊಳ್ಳಲಾಗಿದೆ. ಕೆಲಸದ ಅವಧಿಯನ್ನು ಹೆಚ್ಚಿಸುವುದರೊಂದಿಗೆ ಸಂಬಳವನ್ನು ಹೆಚ್ಚಿಸಲಾಗಿದೆ. ಆದರೆ ಹಿಂದೆ ಕಾರ್ಯನಿರ್ವಹಿಸುತ್ತಿದ್ದ 14,183 ಅತಿಥಿ ಉಪನ್ಯಾಸಕರ ಪೈಕಿ 7,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಸರಕಾರವು 10,000 ಅತಿಥಿ ಉಪನ್ಯಾಸಕರಿಗೆ ಕೆಲಸ ನೀಡಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಅರೋಪಿಸಿದರು. 

ಅತಿಥಿ ಉಪನ್ಯಾಸಕರನ್ನು ಸೇವಾವಧಿ ಆಧಾರದಲ್ಲಿ ಖಾಯಂಗೊಳಿಸಲು ಉಮಾದೇವಿ ಪ್ರಕರಣದಲ್ಲಿ ನ್ಯಾಯಾಲಯವು ನೀಡಿರುವ ತೀರ್ಪು ಅಡ್ಡಿ ಬರುತ್ತದೆ ಎಂದು ಸರಕಾರವು ಸಮಜಾಯಿಷಿ ನೀಡುತ್ತಿದೆ. ಆದರೆ, ಆರೋಗ್ಯ ಇಲಾಖೆ ಸೇರಿದಂತೆ ಪಂಚಾಯಿತಿ ನೌಕರರನ್ನು ಸೇವಾವಧಿ ಆಧಾರದಲ್ಲಿ ಖಾಯಂಗೊಳಿಸಿದಾಗ, ಈ ಕಾನೂನು ತೊಡಕು ಅಡ್ಡಿ ಬರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಲೇಜು ಶಿಕ್ಷಣ ಇಲಾಖೆಯಲ್ಲೇ ಮೂರು ಬಾರಿ ಉಪನ್ಯಾಸಕರನ್ನು ಖಾಯಂಗೊಳಿಸಿರುವ ಪುರಾವೆಗಳಿವೆ ಎಂದು ಮಾಹಿತಿ ನೀಡಿದರು. 

ಸಮಸ್ಯೆಯನ್ನು ಬಗೆಹರಿಸಲು ಹೋಗಿ ಮತ್ತೊಂದು ಸಮಸ್ಯೆಯನ್ನು ಸೃಷ್ಟಿ ಮಾಡಲಾಗಿದೆ. ಇದು ಸರಕಾರದ ವೈಫಲ್ಯವಾಗಿದೆ. ಕೆಲಸವನ್ನು ಕಳದುಕೊಂಡ ಅತಿಥಿ ಉಪನ್ಯಾಸಕರಿಗೆ ಈ ಸರಕಾರವು ಯಾವ ನ್ಯಾಯ ಒದಗಿಸುತ್ತದೆ ಎಂದು ಅವರು ಕಿಡಿ ಕಾರಿದರು. 

ಕುಮಾರ್ ನಾಯಕ್ ವರದಿ ಬಹಿರಂಗಪಡಿಸಿ

ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮತ್ತು ಸೇವಾ ಖಾಯಮಾತಿ ಕುರಿತು ಸರಕಾರವು ಕುಮಾರ ನಾಯಕ್ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಲಾಗಿದೆ. ಸಮಿತಿಯು ವರದಿ ನೀಡಿದೆ. ವರದಿಯನ್ನು ಇಂದಿಗೂ ಏಕೆ ಗೌಪ್ಯವಾಗಿ ಇರಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ವರದಿಯನ್ನು ಕೇಳಲಾಗಿದೆ. ಆದರೆ, ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುತ್ತಿರುವ ಕಾರಣ ಸಮಿತಿಯ ವರದಿಯನ್ನು ಬಹಿರಂಗಗೊಳಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮತ್ತೊಬ್ಬರು ಇದೇ ಮಾಹಿತಿಯನ್ನು ಕೇಳಿದಾಗ ಸಂಬಂಧವೇ ಇಲ್ಲದ ನೇಮಕಾತಿಯ ಆದೇಶ ಪ್ರತಿಯನ್ನು ನೀಡಲಾಗಿದೆ. ಸರಕಾರದ ಈ ಕಣ್ಣಾಮುಚ್ಚಾಲೆ ಆಟದ ಹಿಂದಿನ ಮರ್ಮವೇನು? ಸಮಿತಿಯು ನಿಜಕ್ಕೂ ವರದಿಯನ್ನು ಒಪ್ಪಿಸಿದ್ದರೆ, ಕೂಡಲೇ ಬಹಿರಂಗಪಡಿಸಬೇಕು. 

-ನಾಗಣ್ಣ, ಮುಖಂಡ, ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News