ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಾಯತ್ತತಾ ಉದ್ಘಾಟನಾ ಕಾರ್ಯಕ್ರಮ

Update: 2022-03-19 13:05 GMT

ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‍ಜೆಇಸಿ) ಮೊದಲ ಸ್ವಾಯತ್ತ ತರಗತಿಗಳ ಉದ್ಘಾಟನೆ ಕಾಲೇಜಿನ ಕಲಾಂ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭ ಐಟಿಸಿ ಲಿಮಿಟೆಡ್-ಹೋಟೆಲ್‍ಗಳ ವಿಭಾಗದ ಪ್ರಾಜೆಕ್ಟ್ ಗಳ ನಿವೃತ್ತ ಕಾರ್ಯನಿರ್ವಾಹಕ ಉಪಾಧ್ಯಕ್ಷ‌ ಆಲ್ವಿನ್ ನೊರೊನ್ಹಾ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಬಿಷಪ್ ಮತ್ತು ಕಾಲೇಜಿನ ಅಧ್ಯಕ್ಷ ಅತಿ ವಂ ಡಾ ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಿದ್ದರು.

ನವೆಂಬರ್ 2020 ರಲ್ಲಿ ಯುಜಿಸಿ ತಂಡದ ಭೇಟಿಯ ಸಮಯದಲ್ಲಿ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಕಠಿಣ ಮೌಲ್ಯಮಾಪನಕ್ಕೆ ಒಳಗಾಗಿ 2021-22 ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ  ಹೊಸ ಸ್ವಾಯತ್ತ ಸ್ಥಾನಮಾನವನ್ನು ಪಡೆದಿತ್ತು. ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಇಂಜಿನಿಯರಿಂಗ್ ಕಾಲೇಜುಗಳು ಮಾತ್ರ ಸ್ವಾಯತ್ತ ಸ್ಥಾನಮಾನವನ್ನು ಪಡೆದಿವೆ ಎಂಬ ಅಂಶವು ನಿರಂತರ ಉನ್ನತಿಯಲ್ಲಿರುವ ಕಾಲೇಜಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ಸ್ವಾಯತ್ತ ರಚನೆಯ ಅಡಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಮೊದಲ ಬ್ಯಾಚ್ ಅನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. 

ಪ್ರಾಂಶುಪಾಲರಾದ ಡಾ ರಿಯೋ ಡಿ'ಸೋಜ ಅವರು ತಮ್ಮ ಸ್ವಾಗತ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು ಮತ್ತು ಕ್ಯಾಂಪಸ್‍ನಲ್ಲಿ ಮೊದಲ ಬ್ಯಾಚ್‍ನ ಬಿಇ, ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳನ್ನು ಹೊಂದಿರುವ ಸಂತೋಷವನ್ನು ವ್ಯಕ್ತಪಡಿಸಿದರು. ಇದು ದೊಡ್ಡ ಭರವಸೆ ಮತ್ತು ಹೊಸ ಆರಂಭದ ಸಂಕೇತವಾಗಿದೆ ಎಂದು ಅವರು ಹೇಳಿದರು. ಕಾಲೇಜು ಆರಂಭದಿಂದಲೂ ಸಾಧಿಸಿರುವ ವಿವಿಧ ಮೈಲಿಗಲ್ಲುಗಳ ಕುರಿತು ಮಾತನಾಡಿದ ಅವರು ಇನ್ನೂ ಹಲವು ಮೈಲುಗಲ್ಲುಗಳನ್ನು ಸಾಧಿಸಬೇಕಿದೆ ಎಂದು ಭರವಸೆ ನೀಡಿದರು. 

ಅತಿ ವಂ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಹೊಸದಾಗಿ ವಿನ್ಯಾಸಗೊಳಿಸಿದ ಸ್ವಾಯತ್ತ ಪಠ್ಯಕ್ರಮವನ್ನು ಇತರ ಗಣ್ಯರೊಂದಿಗೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಉತ್ತಮ ಸಾಧನೆ ತೋರಿದ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಲಾಯಿತು. 

ಮುಖ್ಯ ಅತಿಥಿಗಳಾದ ಅಲ್ವಿನ್ ನೊರೊನ್ಹಾ ಅವರು ತಮ್ಮ ಭಾಷಣದಲ್ಲಿ ಕಾಲೇಜು ಸ್ವಾಯತ್ತ ಸ್ಥಾನಮಾನವನ್ನು ಪಡೆದುದ್ದಕ್ಕಾಗಿ ಅಭಿನಂದಿಸಿದರು. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸಾಧನೆ ಮಾಡಿದಾಗ ತಮ್ಮ ವಿದ್ಯಾಸಂಸ್ಥೆಗೆ ಕೃತಜ್ಞರಾಗಿರಬೇಕು ಎಂದು ಅವರು ಕಿವಿಮಾತು ಹೇಳಿದರು. ಪ್ರತಿಯೊಬ್ಬರು ತಮ್ಮ ಸೋಲುಗಳಿಂದ ಪಾಠ ಕಲಿಯಬೇಕು ಎಂದ ಅವರು, ಸೋಲುಗಳ ಬಗ್ಗೆ ಚಿಂತಿಸದೇ ಆ ವೈಫಲ್ಯಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆಯಿತ್ತರು.

ಬಿಷಪ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಶುವಿನ ಬೆಳವಣಿಗೆಯ ವಿವಿಧ ಹಂತಗಳನ್ನು ಪ್ರಸ್ತಾಪಿಸಿದರು ಮತ್ತು ಅದನ್ನು ಕಾಲೇಜಿನ ವಿಕಾಸಕ್ಕೆ ಹೋಲಿಸಿದರು. ಸ್ವಾಯತ್ತತೆಯಿಂದಾಗಿ ಸಂಸ್ಥೆಯು ಉದ್ಯಮ ಆಧಾರಿತ ಪಠ್ಯಕ್ರಮವನ್ನು ಪರಿಚಯಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ಕಲ್ಲು ಮತ್ತು ಕಬ್ಬಿಣದಿಂದ ಮಾಡಿದ ಸಂಸ್ಥೆಗೆ ಮನುಷ್ಯರಿಲ್ಲದೆ ಬೆಲೆ ಇಲ್ಲ ಎಂದ ಅವರು, ಪಠ್ಯಕ್ರಮವನ್ನು ಮೀರಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವಿಸ್ತರಿಸುವಂತೆ ಪ್ರೋತ್ಸಾಹಿಸಿದರು.

ಕಾಲೇಜಿನ ನಿರ್ದೇಶಕರಾದ ವಂ ವಿಲ್ಫ್ರೆಡ್ ಪ್ರಕಾಶ್ ಡಿ'ಸೋಜಾ, ಉಪನಿರ್ದೇಶಕರಾದ ವಂ ಆಲ್ವಿನ್ ರಿಚರ್ಡ್ ಡಿ'ಸೋಜಾ, ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ರಾಕೇಶ್ ಲೋಬೋ, ಶೈಕ್ಷಣಿಕ ಡೀನ್ ಡಾ ವಿನ್ಸೆಂಟ್ ಕ್ರಾಸ್ತಾ, ಸಂಶೋಧನೆ ಮತ್ತು ಅಭಿವೃದ್ಧಿ ಡೀನ್ ಡಾ ಸುಧೀರ್ ಎಂ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ ರಮಾನಂದ ಎಚ್‍ಎಸ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕಿ ಪ್ರತಿಮಾ ಎಸ್ ವಂದಿಸಿದರು. ಸ್ಮಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. 

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News