ಮಾ.22ರಂದು ಕುರಿಗಾಹಿಗಳಿಂದ ವಿಧಾನಸೌಧ ಚಲೋ

Update: 2022-03-19 15:44 GMT

ಬೆಂಗಳೂರು, ಮಾ.19: ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಹಾಗೂ ಕುರಿಗಾಹಿಗಳಿಗೆ ಭದ್ರತೆಯನ್ನು ನೀಡಬೇಕು ಎಂದು ಆಗ್ರಹಿಸಿ ಮಾ.22ರಂದು ಕುರುಬ ಸಮಾಜದ ಸಂಘಟನೆಗಳ ಒಕ್ಕೂಟವು ವಿಧಾನಸೌಧ ಚಲೋಗೆ ಕರೆ ನೀಡಿದೆ.

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಒಕ್ಕೂಟದ ರಾಜ್ಯ ಸಂಚಾಲಕ ಸಿದ್ದಣ್ಣ ತೇಜ ಮಾತನಾಡಿ, ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಈ ದೌರ್ಜನ್ಯಗಳನ್ನು ತಡೆಗಟ್ಟಲು ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಬೇಕು. ಕುರಿಗಾಹಿಗಳ ಆತ್ಮರಕ್ಷಣೆಗಾಗಿ ಬಂದೂಕಿನ ಪರವಾನಿಗೆ ಮತ್ತು ಸರಕಾರದಿಂದ ಉಚಿತವಾಗಿ ಬಂದೂಕನ್ನು ನೀಡಬೇಕು. ಕುರಿಗಾಹಿಗಳ ದೂರುಗಳನ್ನು ಆಲಿಸಲು ಪ್ರತಿ ತಿಂಗಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುರಿಗಾಹಿಗಳ ಸಭೆ ನಡೆಸಬೇಕು ಎಂದು ಆಗ್ರಹಿಸಿದರು. 

ಆಕಸ್ಮಿಕ ದುರ್ಘಟನೆಗಳು ನಡೆದಲ್ಲಿ, ಪರಿಹಾರ ನೀಡಲು ಕುರಿಗಾರರ ಹಿತರಕ್ಷಣೆಗಾಗಿ ಶಾಶ್ವತವಾದ ಪರಿಹಾರ ನಿಧಿಯನ್ನು ಸ್ಥಾಪಿಸಬೇಕು. ಅನುಗ್ರಹ ಯೋಜನೆಯ ಪರಿಹಾರ ಮೊತ್ತವನ್ನು 5 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಬೇಕು. ಹಾಗೆಯೇ ಕುರಿಗಾಹಿ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿದ್ಯವನ್ನು ನೀಡಬೇಕು ಎಂದು ಅವರು ತಿಳಿಸಿದರು.

ಪ್ರತಿ ತಾಲೂಕಿಗೆ ಒಂದರಂತೆ ರೋಗ ತಪಾಸಣಾ ಕೇಂದ್ರಗಳನ್ನು ತೆರೆದು, ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಔಷಧಿಯನ್ನು ನೀಡಬೇಕು. ಪಶು ವೈದ್ಯಕೀಯ ಇಲಾಖೆಯಲ್ಲಿ ಜಾನುವಾರಗಳ ಸಂಖ್ಯೆಯ ಅನುಗುಣವಾಗಿ ಖಾಲಿ ಇರುವ ಹುದ್ದೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವನ್ನು ಶೀಘ್ರವಾಗಿ ನೇಮಕ ಮಾಡಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು. 

ಗೋಷ್ಠಿಯಲ್ಲಿ ರವಿರಾಜ ಕಂಬಳಿ, ವಿಠ್ಠಲ ಬನ್ನೆ, ಮಂಜುನಾಥ ಹಿರವೆ, ರೇಣುಕಾ ಹೋಗಲ ಹನುಮಂತ ಯಮಗಾರ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News