ಕೋವಿಡ್ ಸಂಕಷ್ಟದಿಂದ ಹೊರ ಬರಲು ಇನ್ನೂ ಸಾಕಷ್ಟು ಸಮಯ ಬೇಕು: ಎಂ.ಎಸ್.ರಕ್ಷಾ ರಾಮಯ್ಯ

Update: 2022-03-19 15:52 GMT

ಬೆಂಗಳೂರು, ಮಾ.19: ಎರಡು ವರ್ಷಗಳ ಕೋವಿಡ್ ಸಂಕಷ್ಟದಿಂದ ಉಂಟಾದ ಹಾನಿ ಅಗಾಧವಾಗಿದ್ದು, ಇದರಿಂದ ಹೊರ ಬರಲು ಇನ್ನೂ ಹಲವು ವರ್ಷಗಳ ಸಮಯ ಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಎಂ.ಎಸ್.ರಕ್ಷಾ ರಾಮಯ್ಯ ಹೇಳಿದ್ದಾರೆ.

ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಹಿರಿಯ ಛಾಯಾಗ್ರಾಹಕ ಕಂದವಾರ ವೆಂಕಟೇಶ್ ಅವರು ಕೋವಿಡ್ ಸಂದರ್ಭದಲ್ಲಿ ಚಿತ್ರಿಸಿದ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು, ಕೋವಿಡ್‍ನಿಂದ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಇವುಗಳಿಂದ ಪೂರ್ಣ ಪ್ರಮಾಣದಲ್ಲಿ ಹೊರಬರಲು ಸಾಧ್ಯವಾಗುತ್ತಿಲ್ಲ. ಸಂಕಷ್ಟ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಸರಕಾರ, ಸ್ವಯಂಸೇವಾ ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿವೆ. ಎಲ್ಲರ ಸಹಕಾರದಿಂದ ಸಾಂಕ್ರಾಮಿಕದಿಂದ ಹೊರ ಬರಲು ಸಾಧ್ಯವಾಯಿತು ಎಂದರು.

ವಿಶೇಷವಾಗಿ ಕೋವಿಡ್ ಇದ್ದ ಎರಡು ವರ್ಷಗಳಲ್ಲಿ ಯುವ ಕಾಂಗ್ರೆಸ್ ದೇಶಾದ್ಯಂತ ಉತ್ತಮ ಸೇವೆ ಸಲ್ಲಿಸಿತು. ಆಹಾರ, ಔಷಧ, ಆರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮವಾಗಿ ಸ್ಪಂದಿಸಿತು. ರಾಜ್ಯದಲ್ಲಿ ಯುವ ಕಾಂಗ್ರೆಸ್ ಕೆಲಸ ಇತಿಹಾಸದಲ್ಲಿ ಉಳಿಯವಂತಹದ್ದು ಎಂದು ರಕ್ಷಾ ರಾಮಯ್ಯ ಸ್ಮರಿಸಿದರು.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾಗ ಕೆ.ವೆಂಕಟೇಶ್ ಅವರು 22 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಸೆರೆ ಹಿಡಿದು ಈ ಪೈಕಿ ಕೆಲವು ಅತ್ಯುತ್ತಮ ಚಿತ್ರಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವು ಮುಂದಿನ ಪೀಳಿಗೆಗೆ ಅಮೂಲ್ಯ ವಸ್ತುಗಳಾಗಿವೆ ಎಂದು ರಕ್ಷಾ ರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News