ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸ್ಥಳದಲ್ಲೇ ಮೃತ್ಯು: ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರು, ಮಾ.21: ಬಿಬಿಎಂಪಿ ಕಸದ ಲಾರಿ ಢಿಕ್ಕಿ ಹೊಡೆದ ಪರಿಣಾಮ 13 ವರ್ಷದ ಬಾಲಕಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಇಲ್ಲಿನ ಆರ್‍ಟಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಕ್ಷಯಾ(13) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದಾಶಿವನಗರ ಶಾಲೆಯಲ್ಲಿ 9ನೆ ತರಗತಿ ವ್ಯಾಸಂಗ ಮಾಡುತ್ತಿರುವ ಅಕ್ಷಯಾ, ಬೆಂಗಳೂರು-ಬಳ್ಳಾರಿ ಹೆದ್ದಾರಿಯ ಹೆಬ್ಬಾಳ ಪೆÇಲೀಸ್ ಠಾಣೆ ಎದುರು ಸೋಮವಾರ ಮಧ್ಯಾಹ್ನ 12.30ರ ಸುಮಾರಿನಲ್ಲಿ ರಸ್ತೆ ದಾಟುತ್ತಿದ್ದರು. ಆ ಸಂದರ್ಭದಲ್ಲಿ ಮೇಕ್ರಿ ಸರ್ಕಲ್ ಕಡೆಯಿಂದ ಬಂದ ಬಿಬಿಎಂಪಿ ಕಸದ ಲಾರಿ ಏಕಾಏಕಿ ನುಗ್ಗಿ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಆಕೆಯನ್ನು ತಕ್ಷಣ ಯಲಹಂಕ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕೆಳಸೇತುವೆಯಲ್ಲಿ ನೀರು ನಿಂತಿತ್ತು...
ಹೆಬ್ಬಾಳ ಬಸ್ ನಿಲ್ದಾಣಕ್ಕೆ ಹೊಂದಿಕೊಂಡು ಕೆಳಸೇತುವೆ ಇದ್ದು, ಅದರ ಮೂಲಕವೇ ಪಾದಚಾರಿಗಳು ರಸ್ತೆ ದಾಟುತ್ತಿದ್ದರು. ಆದರೆ, ರವಿವಾರ ರಾತ್ರಿ ಸುರಿದ ಮಳೆಯಿಂದಾಗಿ ಕೆಳಸೇತುವೆಯಲ್ಲಿ ನೀರು ನಿಂತುಕೊಂಡಿತ್ತು. ಜನರು ಓಡಾಡಲು ಕಷ್ಟಪಡಬೇಕಾಗಿತ್ತು. ಹೀಗಾಗಿ, ಜನರೆಲ್ಲರೂ ಪ್ರಮುಖ ರಸ್ತೆಯಲ್ಲೇ ನಡೆದುಕೊಂಡು, ರಸ್ತೆ ದಾಟುತ್ತಿದ್ದರು. ರಸ್ತೆ ದಾಟುವ ವೇಳೆಯಲ್ಲೇ ವೇಗವಾಗಿ ಬಂದ ಲಾರಿ, ಬಾಲಕಿ ಸೇರಿ ಮೂವರಿಗೆ ಗುದ್ದಿತ್ತು. ಜೊತೆಗೆ ಬೈಕ್‍ಗೂ ಲಾರಿ ಢಿಕ್ಕಿ ಹೊಡೆದಿದ್ದು, ಅದರ ಸವಾರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.