ಮಾ.25-26: ʼಮಂಗಳೂರು ಫಿಸಿಯೋಕಾನ್ 2022’ ಕಾರ್ಯಕ್ರಮ
ಮಂಗಳೂರು : ಸೌತ್ ಕೆನರಾ ಫಿಸಿಯೋಥೆರಪಿ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ‘ಮಂಗಳೂರು ಫಿಸಿಯೋಕಾನ್ 2022’ ಅಂತಾರಾಷ್ಟ್ರೀಯ ಮಟ್ಟದ ಫಿಸಿಯೋಥೆರಪಿ ಸಮ್ಮೇಳನವು ಮಾ.25, 26ರಂದು ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನ ಸಂಘಟನಾ ಸಮಿತಿ ಮುಖ್ಯಸ್ಥ ಡಾ. ಯು.ಟಿ.ಇಫ್ತಿಕಾರ್ ಅಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.25ರಂದು ಬೆಳಗ್ಗೆ 9.30ಕ್ಕೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಸಮ್ಮೇಳನವನ್ನು ಉದ್ಘಾಟಿಸುವರು. ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅಧ್ಯಕ್ಷತೆ ವಹಿಸುವರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಕೆ. ರಮೇಶ್ ದಿಕ್ಸೂಚಿ ಭಾಷಣ ಮಾಡಲಿದ್ದು, ಮಣಿಪಾಲ ಮಾಹೆಯ ಡಾ.ಎಚ್.ಎಸ್.ಬಲ್ಲಾಳ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತಯ ಮಾತನಾಡಲಿದ್ದಾರೆ ಎಂದರು.
ಮಾ.26ರಂದು ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು.ಟಿ. ಖಾದರ್ ಮತ್ತಿತರರು ಭಾಗವಹಿಸವರು. ‘ಕೋವಿಡ್ 19 ನಂತರದ ಜನಜೀವನ’ ವಿಷಯವನ್ನಾಧರಿಸಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ಸಮ್ಮೇಳನದ ಅಂಗವಾಗಿ ಮಾ.22ರಂದು ಕೊಣಾಜೆ ಸಮೀಪದ ಪಿ.ಎ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಸಂಸ್ಥೆಯಲ್ಲಿ ರಕ್ತದಾನ ಶಿಬಿರ, ಮಾ.23ರಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ, ಮಾ.24ರಂದು ನಗರದ ಪುರಭವನದಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಪ್ರಾಥಮಿಕ ಸುತ್ತು ನಡೆಯಲಿದೆ ಎಂದು ಡಾ.ಇಫ್ತಿಕಾರ್ ಅಲಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ಕೋಶಾಧಿಕಾರಿ ಪ್ರೊ.ವಿಜಯ್ ಸಾಮ್ಯುಯೆಲ್, ಸಂಘಟಕರಾದ ಡಾ.ಮುಹಮ್ಮದ್ ಸುಹೈಲ್, ಡಾ.ವೈಶಾಲಿ ಉಪಸ್ಥಿತರಿದ್ದರು.