ಕೃಷಿ ಕಾಯ್ದೆ ವಾಪಸ್ ಸಣ್ಣ ಸಾಧನೆಯಷ್ಟೆ, ಹಿಂಬಾಗಿಲಿನಿಂದ ಅದನ್ನು ಜಾರಿಗೊಳಿಸದಂತೆ ಎಚ್ಚರವಹಿಸಿ: ಯೋಗೇಂದ್ರ ಯಾದವ್

Update: 2022-03-21 15:06 GMT

ಬೆಂಗಳೂರು, ಮಾ.21: ರೈತರು ಒಗ್ಗಾಟ್ಟಾಗಿ ಮುಂದಡಿ ಇಡುವುದನ್ನು ತಿಳಿಯದಿದ್ದ ಕೇಂದ್ರ ಸರಕಾರವು ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿರುವುದು ಸಣ್ಣ ಸಾಧನೆ ಅಷ್ಟೇ. ಮೋದಿ ಸರಕಾರ ಕೃಷಿ ಕಾಯ್ದೆಯನ್ನು ಹಿಂಪಡೆದಿರಬಹುದು. ಆದರೆ ಹಿಂಬಾಗಿಲ ಮೂಲಕ ಅದನ್ನು ಜಾರಿ ಮಾಡಲು ಅವರು ಯತ್ನಿಸುತ್ತಾರೆ. ನಾವು ಎಚ್ಚರಿಕೆಯಿಂದಿರಬೇಕು ಎಂದು ಸಂಯುಕ್ತ ಹೋರಾಟ ಕಿಸಾನ್ ಮೋರ್ಚಾದ ಮುಖಂಡ ಯೋಗೇಂದ್ರ ಯಾದವ್ ಕಿವಿಮಾತು ಹೇಳಿದ್ದಾರೆ. 

ಸೋಮವಾರ ಫ್ರೀಡಂಪಾರ್ಕ್‍ನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಜನಪರ್ಯಾಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಜಾರಿಗೊಳಿಸಿದ್ದ ಕೃಷಿ ವಿರೋಧಿ ಕಾಯ್ದೆಗಳು ನಮ್ಮೆದುರಿಗಿದ್ದ ಹೆಚ್ಚುವರಿ ಸಮಸ್ಯೆಯಷ್ಟೆ ಆಗಿದ್ದವು. ಅವನ್ನು ಹಿಂಪಡೆದರೂ, ಕಾನೂನುಗಳು ಮಾತ್ರವಲ್ಲ, ಅವರು ಫ್ರೀ ಟ್ರೇಡ್ ಅಗ್ರಿಮೆಂಟ್ (ಎಫ್‍ಟಿಎ) ಅನ್ನು ಜಾರಿಗೆ ತರುತ್ತಾರೆ. ಆಸ್ಟ್ರೇಲಿಯಾದ ಜೊತೆಗೆ ಫ್ರೀ ಟ್ರೇಡ್ ಅಗ್ರಿಮೆಂಟ್ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಒಂದು ವೇಳೆ ಅದು ನಡೆದರೆ, ನಮ್ಮ ಹೈನುಗಾರರು ನಾಶವಾಗುತ್ತದೆ ಎಂದು ಅವರು ಹೇಳಿದರು.

ಮೂರು ಕೃಷಿ ಕಾನೂನುಗಳನ್ನು ಹಿಂಪಡೆದದ್ದು ಒಳ್ಳೆಯದೆ. ಆದರೆ ಇಂತಹ ಹಲವು ಕಾನೂನು, ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡುವ ಸವಾಲು ನಮ್ಮ ಮುಂದಿದೆ. ಸರಕಾರ ಕನಿಷ್ಠ ಬೆಂಬಲ ಬೆಲೆ ಕುರಿತು ಸಮಿತಿಯನ್ನು ರಚಿಸಿದೆ. ಈ ಸಮಿತಿಗಳಿಂದ ಏನೂ ಆಗುವುದಿಲ್ಲ ಎಂದು ತಿಳಿದಿದೆ. ಈ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ಸಿಕ್ಕಿಲ್ಲ ಆದರೂ, ಒಂದು ಸಾಧನೆಯನ್ನು ಮಾಡಿದ್ದೇವೆ. ದೇಶಾದ್ಯಂತ ರೈತರು, ರೈತ ನಾಯಕರು, ಪತ್ರಕರ್ತರು ಸೇರಿದಂತೆ ರಾಜಕಾರಣಿಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‍ಪಿ)ಯನ್ನು  ಪರಿಚಯಿಸಿದ್ದೇವೆ ಎಂದು ವಿಶ್ಲೇಷಿಸಿದರು. 

ಈಗ ರೈತರಿಗೆ ಸಿಗಬೇಕಾದ ಹಕ್ಕಿನ ಬಗ್ಗೆ ತಿಳಿದಿದ್ದು, ಎಂಎಸ್‍ಪಿ ಸಿಗಲು ಹೋರಾಡಬೇಕು. ಎಂಎಸ್‍ಪಿ ಇತ್ತು, ಎಂಎಸ್‍ಪಿ ಇದೆ ಮತ್ತು ಇರುತ್ತದೆ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಅದನ್ನು ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಅಸ್ತಿತ್ವದಲ್ಲಿರುವ ಎಂಎಸ್‍ಪಿ ಅನ್ನು ಕೊಡಿಸಿ ಎಂದು ನಾವು ಕೇಳಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ತಿಳಿಸಿದರು.

ಈ ರೈತ ಹೋರಾಟದ ಹಾಗೆ ರೈತರು ಒಗ್ಗಟ್ಟಾದುದನ್ನು ನಾನು ಈ ಹಿಂದೆಂದೂ ನೋಡಿರಲಿಲ್ಲ. ಆದರೆ ಈ ಹೋರಾಟ ರೈತರ ಶಕ್ತಿ ಏನು ಎನ್ನುವುದನ್ನು ತೋರಿಸಿದೆ. ಮೋದಿಯಿಂದ ಹಿಡಿದು ಬೊಮ್ಮಾಯಿಯವರೆಗೆ ಎಲ್ಲಾ ಸಿಎಂಗಳಿಗೂ, ಎಲ್ಲಾ ರಾಜಕಾರಣಿಗಳಿಗೂ ರೈತರ ಜೊತೆ ಆಟವಾಡಬೇಡಿ ಎಂದು ಹೇಳಿದ ಅವರು, ರಾಜಕೀಯದ ಜೊತೆ ಆಟವಾಡುವುದೆಂದರೆ ಬೆಂಕಿಯ ಜೊತೆ ಆಟವಾಡಿದಂತೆ.  ನಾವು ಈ ಬಗ್ಗೆ ಎಚ್ಚರದಿಂದಿರಬೇಕು. ದೊಡ್ಡ ಉದ್ದೇಶಗಳಿಗಾಗಿ ಈ ಶಕ್ತಿಯನ್ನು ನಾವು ಉಪಯೋಗಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಸಂಯುಕ್ತ ಹೋರಾಟ- ಕರ್ನಾಟಕದ ಮುಖಂಡ ಬಡಗಲಪುರ ನಾಗೇಂದ್ರ, ಕವಿತಾ ಕುರಗಂಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

► ಬಿಜೆಪಿಯಿಂದ ದೇಶವನ್ನು ರಕ್ಷಿಸಬೇಕಿದೆ 

2024ರ ವೇಳೆಗೆ ಈ ದೇಶದ ಎಲ್ಲಾ ರಾಜಕೀಯ ಪಕ್ಷಗಳು ರೈತರ ವಿಷಯಗಳ ಮುನ್ನೆಲೆಗೆ ತಂದು ಸ್ಪರ್ಧಿಸಬೇಕು ಎಂದು ನಾನು ಬಯಸುತ್ತೇನೆ. ಆಗ ರೈತರ ಹೋರಾಟದ ನಿಜವಾದ ಗೆಲುವಾಗಿರುತ್ತದೆ. ಏಕೆಂದರೆ ಇಂದು ನಮ್ಮ ದೇಶ ಪ್ರಜಾಪ್ರಭುತ್ವ, ಜಾತ್ಯತೀತತೆ ಅಪಾಯದಲ್ಲಿದೆ. ಈ ದೇಶವನ್ನು ರಕ್ಷಿಸುವ ಜವಾಬ್ದಾರಿ ರೈತರ ಮೇಲಿದೆ. ಈ ದೇಶವನ್ನು ನಾಶ ಮಾಡಲು ಹೊರಟಿರುವ ಆರೆಸ್ಸೆಸ್, ಬಿಜೆಪಿ ಶಕ್ತಿಗಳಿಂದ ಈ ದೇಶವನ್ನು ರಕ್ಷಿಸುವುದು ರೈತ ಹೋರಾಟದ ರಾಜಕೀಯದ ಮುಖ್ಯ ಗುರಿಯಾಗಬೇಕಾಗಿದೆ.

-ಯೋಗೇಂದ್ರ ಯಾದವ್, ಮುಖಂಡ, ಸಂಯುಕ್ತ ಹೋರಾಟ ಕಿಸಾನ್ ಮೋರ್ಚಾ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News