ನ್ಯಾಯದ ನಿರೀಕ್ಷೆಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅನ್ಯಾಯವಾಗಿದೆ: ಕ್ಯಾಂಪಸ್ ಫ್ರಂಟ್
ಬೆಂಗಳೂರು, ಮಾ.21: ಹಿಜಾಬ್ ವಿಚಾರವಾಗಿ ಮಾನ್ಯ ಉಚ್ಚ ನ್ಯಾಯಾಲಯವು ನೀಡಿದ ತೀರ್ಪು ಅಸಂವಿಧಾನಿಕವಾಗಿದ್ದು, ನ್ಯಾಯದ ನಿರೀಕ್ಷೆಯಲ್ಲಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಬಹಳ ಖೇದಕರದ ತೀರ್ಪು ಇದಾಗಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದರ ಬದಲಾಗಿ ಸರಕಾರದ ಆದೇಶಗಳನ್ನೇ ಎತ್ತಿ ಹಿಡಿಯುವ ಮುಖಾಂತರ ಅನ್ಯಾಯದ ತೀರ್ಪನ್ನು ಉಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು ಪ್ರಕಟಿಸಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ.
ಪ್ರೆಸ್‍ಕ್ಲಬ್‍ನಲ್ಲಿ ಕ್ಯಾಂಪಸ್ ಫ್ರಂಟ್‍ನ ರಾಜ್ಯ ಉಪಾಧ್ಯಕ್ಷ ಅಡ್ವೋಕೇಟ್ ರೋಶನ್ ನವಾಝ್ ಮಾತನಾಡಿ, ಉಡುಪಿಯ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರೂ ಶೈಕ್ಷಣಿಕ ಸಂಸ್ಥೆಗಳು ನಿರಾಕರಿಸಿದ ಕಾರಣ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋಟ್ ಮೆಟ್ಟಿಲೇರಿದರು. ಆದರೆ ಇಸ್ಲಾಂನಲ್ಲಿ ಕಡ್ಡಾಯಗೊಳಿಸಿದ ಶಿರವಸ್ತ್ರವನ್ನು ಇಸ್ಲಾಂನ ಕಡ್ಡಾಯ ಆಚರಣೆಯೇ ಅಲ್ಲ ಎಂದು ನ್ಯಾಯಾಲಯವು ತೀರ್ಪು ನೀಡುವ ಮುಖಾಂತರ ಮುಸ್ಲಿಂ ಸಮುದಾಯಕ್ಕೆ ಬಹಳ ಆಘಾತವನ್ನು ನೀಡಿದೆ ಎಂದು ಅವರು ಆರೋಪಿಸಿದರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ವಾದ ಮತ್ತು ಪ್ರತಿವಾದವನ್ನು ಆಲಿಸಿ ಸವಾಲುಗಳನ್ನು ಸೃಷ್ಟಿಸಿ ಅದಕ್ಕೆ ಉತ್ತರಿಸಿದೆ. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವೇ ಎಂಬುದು ಮೊದಲನೆಯ ಪ್ರಶ್ನೆಯಾಗಿದ್ದು, ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದೆ. ಆದರೆ ಕುರ್ಹಾನ್‍ನ ಸೂರಃ ಅನ್ನೂರು 31ನೇ ಅಧ್ಯಾಯದಲ್ಲಿ ಮಹಿಳೆಯರು ತಮ್ಮ ತಲೆಕೂದಲನ್ನು ಇತರರಿಗೆ ತೋರ್ಪಡಿಸಬಾರದು, ಹಾಗಾಗಿ ಶಿರವಸ್ತ್ರ ಕಡ್ಡಾಯ ಎಂದು ಬಹಳ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೆ ತೀರ್ಪಿನ 65 ರಿಂದ 68ನೇ ಪುಟದಲ್ಲಿ ಅಬ್ದುಲ್ಲಾ ಯೂಸುಫ್ ಅಲಿ ಎಂಬವರು ಮಾಡಿದ ವ್ಯಾಖ್ಯಾನವನ್ನು ಅಂತಿಮವಾಗಿ ಪರಿಗಣಿಸಿ ಯಾವುದೇ ವಿದ್ವಾಂಸರಲ್ಲಿ ಅಭಿಪ್ರಾಯ ಕೇಳದೆ, ಅದರಲ್ಲಿ ತಪ್ಪಾಗಿ ವ್ಯಾಖ್ಯಾನಿಸಿರುವುದನ್ನು ಪರಿಗಣಿಸಿ, ಶಿರವಸ್ತ್ರ ಇಸ್ಲಾಂನಲ್ಲಿ ಕಡ್ಡಾಯವಲ್ಲ ಹಾಗೂ ಕುರ್ಹಾನಿನ ಬಕರ ಸೂರಃ 256ನೇ ಸೂಕ್ತದಲ್ಲಿ ಉಲ್ಲೇಖಿಸಿದ ‘ಇಸ್ಲಾಂ ಧರ್ಮಕ್ಕೆ ಆಹ್ವಾನಿಸುವುದರಲ್ಲಿ ಬಲವಂತಿಕೆ ಇಲ್ಲ’ ಎಂಬುದನ್ನು ಇದಕ್ಕೆ ಜೋಡಿಸಿ, ‘ಇಸ್ಲಾಂ ಧರ್ಮದಲ್ಲಿ ಬಲವಂತಿಕೆ ಇಲ್ಲ’ ಆದುದರಿಂದ ಶಿರವಸ್ತ್ರ ಕಡ್ಡಾಯವಲ್ಲ ಎಂದು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಅವರು ವಿಶ್ಲೇಷಿಸಿದರು.
ಸಮವಸ್ತ್ರ ಕುರಿತಂತೆ ಮತ್ತೊಂದು ಪ್ರಶ್ನೆಯಾಗಿದ್ದು, ಸರಕಾರ ತೆಗೆದುಕೊಂಡಿರುವ ಎಲ್ಲಾ ನಿರ್ಣಯಗಳು ಕಾನೂನಾತ್ಮಕವಾಗಿವೆ ಎಂದು ಹೈಕೋರ್ಟ್ ತೀರ್ಪುನ್ನು ನೀಡಿದೆ. ಹಾಗಾದರೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿ 2021-2022ರ ಮಾರ್ಗಸೂಚಿಯ ಅಧ್ಯಾಯ-6ರಲ್ಲಿ ಇರುವ ಅಂಶದ ಅನುಸಾರವಾಗಿ ಯಾವುದೇ ಸಮವಸ್ತ್ರ ಕಡ್ಡಾಯಗೊಳಿಸಿರುವುದಿಲ್ಲ. ಒಂದು ವೇಳೆ ಯಾವುದೇ ಕಾಲೇಜಿನ ಆಡಳಿತ ಸಮಿತಿ ಅಥವಾ ಅಲ್ಲಿನ ಪ್ರಾಂಶುಪಾಲರು ಸಮವಸ್ತ್ರವನ್ನು ಕಡ್ಡಾಯಗೊಳಿಸಿದರೆ, ಅದು ಕಾನೂನು ಬಾಹಿರ ಮತ್ತು ಅಪರಾಧ ಎಂದು ಉಲ್ಲೇಖಿಸಲಾಗಿದೆ. ಹೀಗಿರುವಾಗ ಸಮವಸ್ತ್ರ ಕಡ್ಡಾಯಗೊಳಿಸಿದ ಉಡುಪಿಯ ಕಾಲೇಜಿನ ಆಡಳಿತ ಸಮಿತಿ ಮತ್ತು ಪ್ರಾಂಶುಪಾಲರ ಮೇಲೆ ಕ್ರಮ ವಹಿಸಬೇಕಿತ್ತು, ಆದರೆ ಇದ್ಯಾವುದನ್ನು ಗಮನಿಸದೆ ಸರಕಾರ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅಂದರೆ ಫೆ.5ಕ್ಕೆ ಹೊರಡಿಸಿದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಎಂದು ಅವರು ತಿಳಿಸಿದರು.
ಕ್ಯಾಂಪಸ್ ಫ್ರಂಟ್‍ನ ಸದಸ್ಯ ಝಬೈರ್ ಮಾತನಾಡಿ, ತೀರ್ಪಿನಲ್ಲಿ ಸಮವಸ್ತ್ರವನ್ನು ನಿಗದಿಪಡಿಸಿದ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಮಾತ್ರ ಸಮವಸ್ತ್ರ ಧರಿಸಬೇಕು ಎಂದು ಉಲ್ಲೇಖಿಸಿದೆ. ಆದರೆ ಇದನ್ನೇ ಅಸ್ತ್ರವಾಗಿಸಿಕೊಂಡು ರಾಜ್ಯದ ಬಹುತೇಕ ಪದವಿ ಕಾಲೇಜುಗಳಲ್ಲಿ ಶಿರವಸ್ತ್ರ ನಿಷೇಧ ಮಾಡಿ ತರಗತಿಗೆ ಹಾಗೂ ಪರೀಕ್ಷೆಗಳಿಗೆ ಅನುಮತಿ ನಿರಾಕರಿಸುತ್ತಿರುವುದು ಕಂಡುಬರುತ್ತಿದೆ. ಇಷ್ಟಕ್ಕೂ ಕೋರ್ಟ್, ಹಿಜಾಬ್ ಧರಿಸಿ ಶಾಲೆಗೆ ಹೋಗಬೇಡಿ ಎಂದು ತೀರ್ಪು ನೀಡಿಲ್ಲ. ಸಮವಸ್ತ್ರವನ್ನು ಧರಿಸಿ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಧರಿಸುವುದಿಲ್ಲ ಎಂದು ಹೇಳುತ್ತಿಲ್ಲ. ಸಮವಸ್ತ್ರದೊಂದಿಗೆ ಹಿಜಾಬ್ ಅನ್ನು ಧರಿಸುತ್ತೇವೆ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅವರ ಮನವಿಯನ್ನು ಸರಕಾರವು ಪುರಸ್ಕರಿಸಬೇಕು ಎಂದು ಮನವಿ ಮಾಡಿದರು.
ಹೆಣ್ಣುಮಕ್ಕಳ ಭವಿಷ್ಯ ಸರಕಾರದ ಕೈಯಲ್ಲಿದೆ
ಪ್ರಸಕ್ತ ಶೈಕ್ಷಣಿಕ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದು, ಹಿಜಾಬ್ ಧರಿಸುವ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಯನ್ನು ನಿರಾಕರಿಸುವುದು ಸರಿಯಲ್ಲ. ಇದು ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರವಿಡುವ ಸಂಚಾಗಿದೆ. ಹಾಗಾಗಿ ಪರೀಕ್ಷೆಗೆ ಅವಕಾಶ ನೀಡುವುದು ಅಥವಾ ನಿರಾಕರಿಸುವುದು ಸರಕಾರದ ಕೈಯಲ್ಲಿದೆ.
-ಆಕಿಬ್, ಜಿಲ್ಲಾಧ್ಯಕ್ಷರು, ಬೆಂಗಳೂರು ನಗರ, ಕ್ಯಾಂಪಸ್ ಫ್ರಂಟ್
----------------------
ಬೆದರಿಕೆ ಹಾಕಿದವರನ್ನು ಕೇಳಿದರೆ ಉತ್ತರ ಸಿಗಬಹುದು
ಧರ್ಮ ಮುಖ್ಯವೇ ಅಥವಾ ಶಿಕ್ಷಣ ಮುಖ್ಯವೇ ಎಂಬ ಪ್ರಶ್ನೆ ಬಿಜೆಪಿಯವರು ಕೇಳುವ ಪ್ರಶ್ನೆಯಾಗಿದ್ದು, ಇದೊಂದು ಅಸಂಬದ್ಧ ಪ್ರಶ್ನೆ ಎಂಬುದು ತಿಳಿದುಕೊಳ್ಳಬೇಕು. ಹಾಗೆಯೇ ಹಿಜಾಬ್ ತೀರ್ಪಿಗೆ ಸಂಬಂಧಿಸಿದಂತೆ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ ವಿಚಾರವಾಗಿ ಬೆದರಿಕೆ ಹಾಕಿದವರನ್ನು ಪ್ರಶ್ನಿಸಿದರೆ ಸಮಂಜಸ ಉತ್ತರಗಳನ್ನು ಪಡೆಯಬಹುದು. ಆದರೆ ಈ ಕುರಿತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವನ್ನು ಪ್ರಶ್ನಿಸುವುದು ಅಸಂಬಂಧವೇ ಆಗಿದೆ. ಆದರೂ ಸಾಮಾನ್ಯ ವ್ಯಕ್ತಿಗೂ ಕೊಲೆ ಬೆದರಿಕೆ ಹಾಕುವುದನ್ನು ನಾವು ವಿರೋಧಿಸುತ್ತೇವೆ.
-ಸರ್ಫರಾಝ್ ಗಂಗಾವತಿ, ರಾಜ್ಯ ಕಾರ್ಯದರ್ಶಿ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ