×
Ad

ಬೆಂಗಳೂರು: ಮತ್ತೆ ಎಸಿಬಿ ದಾಳಿ, 9 ಸ್ಥಳಗಳಲ್ಲಿ ಶೋಧ

Update: 2022-03-22 08:13 IST

ಬೆಂಗಳೂರು, ಮಾ.22: ಬೆಂಗಳೂರು ಅಭಿವದ್ಧಿ ಪ್ರಾಧಿಕಾರ(ಬಿಡಿಎ)ದ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಸಹಕರಿಸುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆ 9 ಮಧ್ಯವರ್ತಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ವಜ್ರ, ಚಿನ್ನಾಭರಣ, ಬಹುಕೋಟಿ ಆಸ್ತಿ ಮೌಲ್ಯದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ

ಮಂಗಳವಾರ ಬೆಳಗ್ಗೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತತ್ವದ ತಂಡವು ಇಲ್ಲಿನ ಚಾಮರಾಜಪೇಟೆಯ ಬಿ.ಎನ್.ರಘು, ಆರ್.ಟಿ ನಗರದ ಮೋಹನ್, ಮಲ್ಲತ್ತಹಳ್ಳಿಯ ಮುನಿರತ್ನ, ದೊಮ್ಮಲೂರಿನ ಮನೋಜ್, ರಾಜರಾಜೇಶ್ವರಿನಗರದ ತೇಜಸ್ವಿ, ಮುದ್ದಯ್ಯನಪಾಳ್ಯದ ಅಶ್ವಥ್, ಚಿಕ್ಕಹನುಮಯ್ಯ ಹಾಗೂ ಬಿಡಿಎ ಬಡಾವಣೆಯ ರಾಮ, ಲಕ್ಷ್ಮಣ ಎಂಬುವರ ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡರು.

ಭ್ರಷ್ಟಾಚಾರದಲ್ಲಿ ತೊಡಗಿದ್ದ ಆರೋಪದಡಿ ಬಿಡಿಎ ಅಧಿಕಾರಿಗಳ ಮನೆಗಳ ಮೇಲೆ ಕೆಲ ದಿನಗಳ ಹಿಂದೆ ದಾಳಿ ಮಾಡಿ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದ ಎಸಿಬಿ ಅಧಿಕಾರಿಗಳು, ಇದೀಗ ಮಧ್ಯವರ್ತಿಗಳ ಮನೆಗಳ ಮೇಲೆಯೂ ದಾಳಿ ನಡೆಸಿದ್ದಾರೆ. 

9 ಮಧ್ಯವರ್ತಿಗಳು ಐಷಾರಾಮಿ ಮನೆಗಳಲ್ಲಿ ವಾಸಿಸುತ್ತಿರುವುದಲ್ಲದೆ ಅವರುಗಳ ಮನೆಗಳಲ್ಲಿ ಕೆಜಿಗಟ್ಟಲೆ ಚಿನ್ನ, ಲಕ್ಷಗಟ್ಟಲೆ ಹಣ, ದುಬಾರಿ ವಾಚ್‍ಗಳು ಮತ್ತು ಐಷಾರಾಮಿ ಕಾರುಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ.

ಈಜುಕೊಳ: ಇಲ್ಲಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್‍ನಲ್ಲಿ ವಾಸಿಸುತ್ತಿರುವ ತೇಜಸ್ವಿ ಅವರ ಮನೆಯಯೇ ಈಜುಕೋಳ ಇರುವುದು ಪತ್ತೆಯಾಗಿದೆ. ಕೇವಲ 7 ವರ್ಷಗಳ ಹಿಂದೆ ಬಿಡಿಎ ಮಧ್ಯವರ್ತಿ ಆಗಿ ಕೆಲಸ ಆರಂಭಿಸಿದ್ದ ಈತ ಕೋಟ್ಯಂತರ ಹಣ ಸಂಪಾದನೆ ಮಾಡಿದ್ದೇನೆ ಎಂದು ಹೇಳಲಾಗುತ್ತಿದೆ.

ಮುದ್ದಯ್ಯನಪಾಳ್ಯದ ಅಶ್ವಥ್ ಎಂಬಾತ ಕೆಲ ವರ್ಷಗಳ ಹಿಂದೆ ಸಾಮಾನ್ಯ ಜೀವನ ಸಾಗಿಸುತ್ತಿದ್ದ ಇದೀಗ  ಜ್ಞಾನಭಾರತಿ ಆರ್‍ಟಿಒ ಕಚೇರಿ ಸಮೀಪ ಬಂಗಲೆ ಕಟ್ಟಿಸಿದ್ದೇನೆ. ಜತೆಗೆ ಹಲವಾರು ಐಷಾರಾಮಿ ಕಾರುಗಳು ಇರುವುದು ಪತ್ತೆಯಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ದಾಖಲೆ ಪತ್ರಗಳು ಪತ್ತೆ: ಮಲ್ಲತ್ತಹಳ್ಳಿಯ ಮುನಿರತ್ನನ ಮನೆಯಲ್ಲಿ ಮಹತ್ವದ ಹಲವಾರು ದಾಖಲೆ ಪತ್ರಗಳು ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆಗಾಗಿ ಬಿಬಿಎಂಪಿ ಅಧಿಕಾರಿಯೊಬ್ಬರನ್ನು ಕರೆಸಿಕೊಂಡು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 

ವಜ್ರ ಪತ್ತೆ: ಮನೋರಾಯನಪಾಳ್ಯದ ಮೋಹನ್ ಮನೆಯಲ್ಲಿನ ಬೀರು, ಲಾಕರ್‍ಗಳಲ್ಲಿ ಕೋಟಿ ಕೋಟಿ ಬೆಲೆಬಾಳುವ ಮುತ್ತು, ಚಿನ್ನ, ವಜ್ರದ ಆಭರಣಗಳು ಮತ್ತು ನೋಟಿನ ಕಂತೆಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

ಎಲ್ಲರ ಮನೆಗಳಲ್ಲೂ ಹಣ, ಚಿನ್ನದ ಒಡವೆಗಳು, ದೇಶ ವಿದೇಶಗಳ ಕೂಲಿಂಗ್ ಗ್ಲಾಸ್‍ಗಳು, ಗಡಿಯಾರಗಳು ಪತ್ತೆಯಾಗಿವೆ. ಎಲ್ಲ ಆರೋಪಿಗಳ ಮನೆಗಳಲ್ಲಿ ಬಿಡಿಎಗೆ ಸಂಬಂಧಿಸಿದ ದಾಖಲೆ ಪತ್ರಗಳು ಲಭ್ಯವಾಗಿದ್ದು, ಎಲ್ಲ ದಾಖಲೆಗಳನ್ನು ವಶಕ್ಕೆ ಪಡೆದು ಶೋಧ ಮುಂದುವರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೆ ಕಾರಣವೇನು?

ಬಿಡಿಎಯಲ್ಲಿ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರುಗಳು ಅಧಿಕಾರಿಗಳ ಜತೆ ಸೇರಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದರೂ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ದಾಳಿ ಹಿಂದೆ ಆಯುಕ್ತರ ಕುಮ್ಮಕ್ಕು: ಆರೋಪ

ನನ್ನ ಮೇಲೆ ಎಸಿಬಿ ದಾಳಿ ನಡೆಸಿರುವ ಹಿಂದೆ ಬಿಡಿಎ ಆಯುಕ್ತ ರಾಜೇಶ್ ಗೌಡ ಅವರ ಕುಮ್ಮಕ್ಕು ಇದೆ ಎಂದು ಇಲ್ಲಿನ ಕೆಜಿ ಸರ್ಕಲ್ ನಿವಾಸಿ ಅಶ್ವತ್ಥ್ ಆರೋಪಿಸಿದರು.

ಮಂಗಳವಾರ ಎಸಿಬಿ ದಾಳಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಡಿಎ ಅಧಿಕಾರಿಗಳ ಪಿತೂರಿಯಿಂದ ನನ್ನ ಮೇಲೆ ಎಸಿಬಿ ದಾಳಿ ಮಾಡಿದ್ದಾರೆ. ಅಲ್ಲದೆ, ನಮ್ಮ ಕುಟುಂಬದ ಒಟ್ಟು 40 ಎಕರೆ ಜಮೀನು ಹೋಗಿದೆ. ಈ ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವೆ. ಅಲ್ಲದೆ, ನಾನು ಖಾಸಗಿ ವ್ಯಕ್ತಿ, ನನ್ನ ಮೇಲೆ ಹೇಗೆ ದಾಳಿ ಎಂದು ಕೇಳಿದ್ದೆ, ಅದಕ್ಕೆ ವಾರೆಂಟ್ ಇದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ ಎಂದರು.

ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ರೈತರ ಜಮೀನು ಕಳೆದುಕೊಂಡಿರುವ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದೇನೆ. ಯಾವ ಯಾವ ರೈತರಿಗೆ ಅನ್ಯಾಯ ಆಗಿದೆ ಅದರ ವಿರುದ್ಧ ಎಲ್ಲ ನಮ್ಮ ಹಳ್ಳಿಯ ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಿಸಿದ್ದೇನೆ. ಈ ಕಾರಣಕ್ಕೆ ದಾಳಿ ನಡೆದಿರಬಹುದು ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News