ಈಶಾನ್ಯ ದಿಲ್ಲಿ ಗಲಭೆ ಪ್ರಕರಣ: ಸೋನಿಯಾ, ರಾಹುಲ್, ಕಪಿಲ್ ಮಿಶ್ರಾಗೆ ಹೊಸ ನೋಟಿಸ್

Update: 2022-03-22 17:52 GMT

ಹೊಸದಿಲ್ಲಿ, ಮಾ. 22: ಈಶಾನ್ಯ ದಿಲ್ಲಿ ಹಿಂಸಾಚಾರ ಹಾಗೂ ರಾಜಕೀಯ ನಾಯಕರ ದ್ವೇಷ ಭಾಷಣಕ್ಕೆ ಸಂಬಂಧಿಸಿದ ದೂರುಗಳ ಗುಚ್ಛವನ್ನು ವಿಚಾರಣೆ ನಡೆಸಿದ ಸಂದರ್ಭ ದಿಲ್ಲಿ ಉಚ್ಚ ನ್ಯಾಯಾಲಯ ಹಲವು ಪ್ರಮುಖ ರಾಜಕೀಯ ನಾಯಕರು, ಹೋರಾಟಗಾರರು ಹಾಗೂ ಇತರರ ವಿರುದ್ಧ ಮಂಗಳವಾರ ಹೊಸ ನೋಟಿಸು ಜಾರಿ ಮಾಡಿದೆ.

ದ್ವೇಷ ಭಾಷಣಕ್ಕೆ ಸಂಬಂಧಿಸಿ ಹಲವು ರಾಜಕಾರಣಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿರುವ ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಮೃದುಲ್ ಹಾಗೂ ರಜನೀಶ್ ಭಟ್ನಾಗರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ನೋಟಿಸು ಜಾರಿ ಮಾಡಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್ ಗಾಂಧಿ ಹಾಗೂ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್, ಪರ್ವೇಶ್ ಸಾಹಿಬ್ ವರ್ಮಾ, ಕಪಿಲ್ ಮಿಶ್ರಾ ಹಾಗೂ ಇತರರಿಗೆ ಹೊಸ ನೋಟಿಸು ಜಾರಿ ಮಾಡಲಾಗಿದೆ.

ಈ ಪ್ರತಿವಾದಿಗಳನ್ನು ಆರೋಪಿಗಳು ಎಂದು ಕರೆದಿರುವುದಕ್ಕೆ ನ್ಯಾಯಾಲಯ ವಕೀಲರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಇವರೆಲ್ಲರು ಕೇವಲ ಪ್ರಸ್ತಾಪಿತ ಪ್ರತಿಪಾದಿಗಳು, ಆರೋಪಿಗಳಲ್ಲ ಎಂದು ಅದು ಹೇಳಿತು. ‘‘ನೀವು ಅವರ ವಿರುದ್ಧ ಆರೋಪಗಳನ್ನು ಮಾಡಿರುವುದರಿಂದ ನಾವು ಅವರ ಪ್ರತಿಕ್ರಿಯೆಯನ್ನು ಕೇಳುತ್ತಿದ್ದೇವೆ’’ ಎಂದು ನ್ಯಾಯಾಲಯ ಹೇಳಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News