ಬೆಂಗಳೂರು: ದೇಗುಲ ಪಕ್ಕದಲ್ಲಿದ್ದ ಮುಸ್ಲಿಮರ ಚಪ್ಪಲಿ ಅಂಗಡಿಗಳ ತೆರವಿಗೆ ಸಂಘಪರಿವಾರ ಕಾರ್ಯಕರ್ತರ ಆಗ್ರಹ

Update: 2022-03-23 16:03 GMT

ಬೆಂಗಳೂರು, ಮಾ.23: ದೇವಾಲಯ ವ್ಯಾಪ್ತಿಯಲ್ಲಿ ಪಾದರಕ್ಷೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮುಸ್ಲಿಮರ ಪಾದರಕ್ಷೆ ಮಳಿಗೆಗಳಿಗೆ ಬೀಗ ಜಡಿಯಲಾಯಿತು.

ಬುಧವಾರ ಇಲ್ಲಿನ ಉಪ್ಪಾರಪೇಟೆಯಲ್ಲಿರುವ ಆಂಜನೇಯ ದೇವಾಲಯ ಬಳಿಯ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಂಟು ಅಂಗಡಿಗಳಲ್ಲಿ ಮುಸ್ಲಿಮರು ಪಾದರಕ್ಷೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಳಿಗೆಗಳನ್ನು ಖಾಲಿ ಮಾಡುವಂತೆ ಒತ್ತಾಯ ಮಾಡಿದರು.

ಬಳಿಕ ಸ್ಥಳಕ್ಕಾಗಮಿಸಿದ ಮುಜರಾಯಿ ಇಲಾಖೆಯ ತಹಶೀಲ್ದಾರ್, ಅರವಿಂದ್ ಬಾಬು, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಸದ್ಯಕ್ಕೆ ತಾತ್ಕಾಲಿಕವಾಗಿ ಮಳಿಗೆಗಳನ್ನು ಬಂದ್ ಮಾಡುವಂತೆ ಸೂಚಿಸಿದರು. ಅದರಂತೆ, ಮುಸ್ಲಿಮರು ವ್ಯಾಪಾರ ಮಾಡುವ ಒಟ್ಟು ಎಂಟು ಮಳಿಗೆಗಳನ್ನು ಬೀಗ ಜಡಿಯಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ವ್ಯಾಪಾರಸ್ಥರು, ಶೇಷಾದ್ರಿ ಎಂಬುವರು ಮುಜರಾಯಿ ಇಲಾಖೆಯಿಂದ ಟೆಂಡರ್ ಪಡೆದು ನಮಗೆ ಬಾಡಿಗೆಗೆ ಈ ಮಳಿಗೆಗಳನ್ನು ನೀಡಿದ್ದಾರೆ. ನಾವು ಯಾವುದೇ ರೀತಿ ಕಾನೂನು ಬಾಹಿರವಾಗಿ ಇದನ್ನು ಪಡೆದುಕೊಂಡಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ವಿವಾದ ಹುಟ್ಟುಹಾಕಿದ್ದಾರೆ ಎಂದು ತಿಳಿಸಿದರು.

ಹತ್ತಿರ ಮೆಜೆಸ್ಟಿಕ್, ಜನರ ಓಡಾಟ ಹೆಚ್ಚಾಗಿರುವ ಕಾರಣದಿಂದಲೇ ಪಾದರಕ್ಷೆ ಮಾರಾಟ ಮಾಡುತ್ತಿದ್ದೇವೆ. ಯಾವ ದೇವರಿಗೂ ಅಪಮಾನ ಮಾಡುವ ಉದ್ದೇಶ ನಮಗೆ ಇಲ್ಲ. ಆದರೆ, ಇದರಲ್ಲೂ ನಮ್ಮನ್ನು ತಪ್ಪಿತಸ್ಥರೆಂದು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಪರಿವಾರದ ಕಾರ್ಯಕರ್ತರು, ದೇವಾಲಯದ ಮುಂದೆ ಚಪ್ಪಲಿ ಅಂಗಡಿ ಇಡಲು ಅವಕಾಶ ಕೊಟ್ಟಿರುವುದು ಸರಿಯಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಿಂದೂಗಳಿಗೆ ಮಾತ್ರ ಈ ಮಳಿಗೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News