×
Ad

ಬೆಂಗಳೂರು: ಪತ್ರಕರ್ತೆಯ ಅನುಮಾನಾಸ್ಪದ ಸಾವು: ಕೊಲೆ ಶಂಕೆ

Update: 2022-03-24 10:43 IST

ಬೆಂಗಳೂರು, ಮಾ.23: ಪತ್ರಕರ್ತೆಯೊಬ್ಬರ ಮೃತದೇಹ ಅವರು ವಾಸವಿದ್ದ ವಸತಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿ ಮನೆಯವರು ಪೊಲೀಸ್ ದೂರು ನೀಡಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಿಟರ್ಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ ಶ್ರುತಿ (35) ಮೃತಪಟ್ಟವರು ಎಂದು ಪೊಲೀಸರು ಗುರುತಿಸಿದ್ದಾರೆ.

ಈ ಸಂಬಂಧ ಶ್ರುತಿಯವರ ಸಹೋದರ ನಿಶಾಂತ್‌ ನಾರಾಯಣನ್‌ ಪೊಲೀಸ್ ದೂರು ನೀಡಿದ್ದು, ಪತಿ ಅನೀಶ್‌ ಕೊಯಾಡನ್‌ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.

ಕೇರಳ ಮೂಲದ ಶ್ರುತಿ ಹಾಗೂ ಅನೀಶ್‌ 2017ರಲ್ಲಿ ವಿವಾಹಿತರಾಗಿದ್ದರು. ಬೆಂಗಳೂರಿಗೆ ಮರಳಿದ್ದ ದಂಪತಿ ವೈಟ್‌ಫೀಲ್ಡ್‌ನ ನಲ್ಲೂರುಹಳ್ಳಿ ರಸ್ತೆ ಬಳಿಯ ಎಸ್‌.ವಿ.ಮೈಪೇರ್‌ ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವಾಸವಿತ್ತು. ಖಾಸಗಿ ಕಂಪೆನಿ ಉದ್ಯೋಗಿಯಾಗಿರುವ ಅನೀಶ್‌, ಪ್ರತಿನಿತ್ಯ ಶ್ರುತಿಗೆ ಚಿತ್ರಹಿಂಸೆ ನೀಡುತ್ತಿದ್ದ. ಸಂಬಳದ ಹಣವನ್ನೆಲ್ಲಾ ತವರು ಮನೆಗೆ ನೀಡುತ್ತೀ ಎಂದು ಹೇಳಿ ಹಲ್ಲೆ ನಡೆಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾ.22ರ ಬೆಳಗ್ಗೆ ಶ್ರುತಿಯ ಅಪಾರ್ಟ್‌ಮೆಂಟ್‌ಗೆ ಹೋಗಿದ್ದೆವು. ಮನೆಯ ಬೀಗ ಹಾಕಿತ್ತು. ಕಿಟಕಿಯಿಂದ ಇಣುಕಿ ನೋಡಿದಾಗ ಒಳಗೆ ಯಾರೂ ಕಾಣಲಿಲ್ಲ. ಭದ್ರತಾ ಸಿಬ್ಬಂದಿ ನೆರವಿನಿಂದ ಬಾಲ್ಕನಿಯ ಬಾಗಿಲು ಮುರಿದು ಒಳಗೆ ಹೋದಾಗ ಮಲಗುವ ಕೋಣೆಯಲ್ಲಿ ಶ್ರುತಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಗಂಡನೇ ಆಕೆಯನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದೂ ನಿಶಾಂತ್‌ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News