×
Ad

ಕೊಣಾಜೆ: ಬಂಧಿಸಲು ಹೋದ ಎಸ್ಸೈಗೆ ಚೂರಿಯಿಂದ ಇರಿದು ಆರೋಪಿ ಪರಾರಿ

Update: 2022-03-24 11:06 IST

ಕೊಣಾಜೆ, ಮಾ.24: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು‌ ಬಂಧಿಸಲು ತೆರಳಿದ್ದ ಕೊಣಾಜೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಆರೋಪಿಯೋರ್ವ ಚೂರಿಯಿಂದ ಇರಿದು ಪರಾರಿಯಾದ ಘಟನೆ ಗುರುವಾರ ಮುಂಜಾನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕಾನ ಬಳಿ ನಡೆದಿರುವುದು ವರದಿಯಾಗಿದೆ.

ಕೊಣಾಜೆ‌ ಠಾಣೆಯ ಎಸ್ಸೈ ಶರಣಪ್ಪರ ಚೂರಿ ಇರಿತದಿಂದ ಗಾಯಗಳಾಗಿವೆ. ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾದಿಕ್ ಎಸ್ಸೈಯ ಕೈಗೆ ಚೂರಿಯಿಂದ ಇರಿದು ಪರಾರಿಯಾದ ಆರೋಪಿಯಾಗಿದ್ದಾನೆ. ಇನ್ನೋರ್ವ ಆರೋಪಿ ನಾಸಿರ್ ಎಂಬಾತನನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಈ ಇಬ್ಬರು ಆರೋಪಿಗಳು ಪಜೀರು ಸಮೀಪದ ಅರ್ಕಾ‌ನ ಸಮೀಪದ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಇರುವ ಬಗ್ಗೆ ಬಂದರು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬಂದರು ಪೊಲೀಸರು ಕೊಣಾಜೆ ಪೊಲೀಸರ ಸಹಾಯ ಪಡೆದು ಈ ಕಾರ್ಯಾಚರಣೆಗೆ ಮುಂದಾಗಿದ್ದರು. ಅದರಂತೆ ಅರ್ಕಾನಕ್ಕೆ ತೆರಳಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ವೇಳೆ ಆರೋಪಿ ಸಾದಿಕ್ ಕೊಣಾಜೆ‌ ಠಾಣೆಯ ಎಸ್ಸೈ ಶರಣಪ್ಪರ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸಾದಿಕ್ ಈ ಹಿಂದೆ ಬಂದರು ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯಕ್ಕೆ ಸಂಬಂಧಿಸಿ ಸೆರೆ ಹಿಡಿಯಲು ಮುಂದಾದ ಪೊಲೀಸ್ ಸಿಬ್ಬಂದಿ ವಿನೋದ್ ಮತ್ತು ಪ್ರವೀಣ್ ಎಂಬವರಿಗೆ ಚೂರಿಯಿಂದ ಇರಿದು ಪರಾರಿಯಾದ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News