ಮಾ.26 ರಂದು ಮಂಗಳೂರು ಕಂಬಳಕ್ಕೆ ಚಾಲನೆ

Update: 2022-03-24 12:36 GMT

ಮಂಗಳೂರು, ಮಾ.24: ಮಂಗಳೂರು ಕಂಬಳ ಸಮಿತಿ ವತಿಯಿಂದ ನಡೆಸಲಾಗುವ 5ನೇ ವರ್ಷದ ರಾಮಲಕ್ಷ್ಮಣ ಜೋಡುಕರೆ ಹೊನಲು ಬೆಳಕಿನ ಕಂಬಳ ನಗರದ ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಮಾ.26, 27ರಂದು ನಡೆಯಲಿದೆ.

26ರಂದು ಬೆಳಗ್ಗೆ 8.30ಕ್ಕೆ ಉದ್ಘಾಟನೆಗೊಂಡು ಮರುದಿನ 27ರಂದು ಬೆಳಗ್ಗೆ ಬಹುಮಾನ ವಿತರಣೆ ಮೂಲಕ ಸಮಾಪನಗೊಳ್ಳಲಿದೆ ಎಂದು ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಚೌಟ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನವರಿಯಲ್ಲಿ ನಡೆಯಬೇಕಿರುವ ಕಂಬಳ ಮಾರ್ಚ್‌ನಲ್ಲಿ ಆಗುತ್ತಿದೆ, ಹಾಗಿದ್ದರೂ 130 ಜೊತೆ ಕೋಣಗಳು ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. 26ರಂದು ಬೆಳಗ್ಗೆ ದೀಪ ಪ್ರಜ್ವಲನೆಯನ್ನು ಕರಾವಳಿ ಕಾಲೇಜು ಸಮೂಹಗಳ ಮುಖ್ಯಸ್ಥ ಎಸ್.ಗಣೇಶ್ ರಾವ್ ನೆರವೇರಿಸಲಿದ್ದು, ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಕೆ.ಚಿತ್ತರಂಜನ್ ಉದ್ಘಾಟನೆ ನೆರವೇರಿಸುವರು. ಕದ್ರಿ ಯೋಗೇಶ್ವರ ಮಠದ ಶ್ರೀ ನಿರ್ಮಲ್‌ನಾಥ್ ಜಿ, ರಾಮಕೃಷ್ಣ ಮಠದ ಏಕಗಮ್ಯಾನಂದಜಿ, ಆದಿಚುಂಚನಗಿರಿ ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ವಜ್ರದೇಹಿ ಮಠದ ಶ್ರೀರಾಜಶೇಖರಾನಂದಜಿ ಪಾಲ್ಗೊಳ್ಳಲಿದ್ದಾರೆ.

ಈ ಬಾರಿ ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕನೆ ಹಲಗೆ 7.5 ಕೋಲು ಎತ್ತರಕ್ಕೆ ನೀರು ಹಾಯಿಸಿದವರಿಗೆ 2 ಪವನ್, 6.5 ಕೋಲು ಎತ್ತರ ನಿಶಾನಿಗೆ ನೀರು ಹಾಯಿಸಿದವರಿಗೆ 1 ಪವನ್ ಬಹುಮಾನ ನೀಡಲಾಗುವುದು. ಹಗ್ಗ, ನೇಗಿಲು ಹಿರಿಯ ವಿಭಾಗಗಳಲ್ಲಿ ಪ್ರಥಮ ದ್ವಿತೀಯ ತಲಾ 2 ಹಾಗೂ 1 ಪವನ್, ಅಡ್ಡ ಹಲಗೆ ಹಗ್ಗ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ 1, ದ್ವಿತೀಯ ಅರ್ಧ ಪವನ್ ಬಂಗಾರ ಬಹುಮಾನ ಇರಲಿದೆ.

ಸಾಮಾನ್ಯವಾಗಿ ಕಂಬಳದ ಕೊನೆಯ ಹಂತದ ಕ್ವಾರ್ಟರ್ ಫೈನಲ್, ಸೆಮಿಫೈನಲ್, ಫೈನಲ್ಸ್‌ಗಳು ಮಾ.27ರ ಭಾನುವಾರ ಮುಂಜಾನೆ 6ರ ಬಳಿಕ ನಡೆಯುತ್ತವೆ, ಹಾಗಾಗಿ ನಗರದ ಕಂಬಳ ಪ್ರೇಮಿಗಳು ಆ ವೇಳೆಯಲ್ಲಿ ಆಗಮಿಸಿದರೆ ಹೆಚ್ಚುರೋಚಕ ಸ್ಪರ್ಧೆಗಳನ್ನು ವೀಕ್ಷಿಸುವ ಅವಕಾಶ ಇದೆ ಎಂದು ಕ್ಯಾಪ್ಟನ್ ಬೃಜೇಶ್ ಚೌಟ ವಿವರಿಸಿದರು.

ಫೊಟೊಗ್ರಫಿ, ಇನ್‌ಸ್ಟ ರೀಲ್ಸ್ ಸ್ಪಧೆರ್
ಈ ಬಾರಿ ಮಂಗಳೂರು ಕಂಬಳದ ಫೊಟೊಗ್ರಫಿ ಸ್ಪರ್ಧೆ ಆಯೋಜಿಸಲಾಗಿದೆ. ಮೊದಲ ಬಾರಿಗೆ ಕಂಬಳದ ರೀಲ್ಸ್ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ. ಮಾ.26ರಿಂದ 27ರ 11 ಗಂಟೆ ವರೆಗೆ ಇನ್‌ಸ್ಟಾಗ್ರಾಂಗೆ ರೀಲ್ಸ್ ಅಪ್‌ಲೋಡ್ ಮಾಡಬಹುದು, ಅದನ್ನು mangalurukambla2022 ಹ್ಯಾಷ್‌ಟ್ಯಾಗ್ ನೊಂದಿಗೆ ಅಪ್‌ಲೋಡ್ ಮಾಡಬೇಕು. ಈ ಬಾರಿ ಡ್ರಾಯಿಂಗ್ ಸ್ಪರ್ಧೆ ಇರುವುದಿಲ್ಲ ಎಂದು ಅವರು ಹೇಳಿದರು.

ಮಾರ್ಚ್‌ನಲ್ಲಿ ನಡೆಯುತ್ತಿರುವುದರಿಂದ ಕಂಬಳದ ಕೋಣಗಳಿಗೆ, ಓಡಿಸುವವರಿಗೂ ಬೇಸಗೆಯ ಝಳ ತಟ್ಟುವ ಸಾಧ್ಯತೆ ಇರುವುದರಿಂದ ರವಿವಾರ 10 ಗಂಟೆಯೊಳಗೆ ಮುಗಿಸುವುದಕ್ಕೆ ಆದ್ಯತೆ ನೀಡಲಾಗುವುದು, ಅದಕ್ಕಾಗಿ ಎಲ್ಲ ಕಂಬಳ ಕೋಣಗಳ ಯಜಮಾನರು, ಓಡಿಸುವವರೂ ಸಹಕರಿಸುವಂತೆ ಮಂಗಳೂರು ಕಂಬಳ ಸಲಹೆಗಾರ ವಿಜಯ್ ಕಂಗಿನಮನೆ ವಿನಂತಿಸಿದರು.

ಈಶ ಫೌಂಡೇಶನ್ ಈಗಾಗಲೇ ಸದ್ಗುರು ನೇತೃತ್ವದಲ್ಲಿ ನಮ್ಮ ಮಣ್ಣಿನ ಸತ್ವ ಉಳಿಸೋಣ ಎಂಬ ಅಭಿಯಾನ ಹಮ್ಮಿಕೊಂಡಿದೆ. ಈಶ ಫೌಂಡೇಶನ್ ಪ್ರತಿನಿಧಿಗಳು ಈ ಕಂಬಳದ ಸಂದರ್ಭದಲ್ಲಿ ಇದರ ಕುರಿತು ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ಫೌಂಡೇಶನ್‌ನ ದೀಪಕ್ ಭಟ್ ತಿಳಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯಗುತ್ತು, ಸಲಹೆಗಾರ ಪಿ.ಆರ್.ಶೆಟ್ಟಿ, ತೀರ್ಪುಗಾರ ಸುಧಾಕರ್ ಶೆಟ್ಟಿ ಮೊಗರೋಡಿ, ಸಂಜಯ್ ಪ್ರಭು, ಗುರುಚಂದ್ರ ಹೆಗ್ಡೆ ಗಂಗಾರಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News