ಕುರ್ಕಾಲು ಯೋಜನೆ ವಿರುದ್ಧ ಪ್ರತಿಭಟನೆಗೆ ನಿರ್ಧಾರ
ಉಡುಪಿ, ಮಾ.24: ಕಾಪು ತಾಲೂಕಿನಲ್ಲಿ ಹರಿಯುವ ಪಾಪನಾಶಿನಿ ನದಿಗೆ ತಾಲೂಕಿನ ಕುರ್ಕಾಲುನಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಬರಲಿದ್ದು, ಈ ಜನರೋಧಿ, ರೈತ ವಿರೋಧಿ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಲು ಆಸುಪಾಸಿನ ಗ್ರಾಮಗಳ ಸ್ಥಳೀಯರು ಹಾಗೂ ರೈತರು ನಿರ್ಧರಿಸಿದ್ದಾರೆ.
ನದಿಯ ಇಕ್ಕೆಲಗಳಲ್ಲಿ ವಾಸವಾಗಿರುವ ಜನತೆ ಮತ್ತು ಕೃಷಿಕರಿಗಲ್ಲದೇ ಸ್ಥಳೀಯಾಡಳಿತಗಳಿಗೂ ಮಾಹಿತಿ ನೀಡದೆ ಎಲ್ಲರನ್ನು ಕತ್ತಲಲ್ಲಿಟ್ಟು ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ದೀರ್ಘಾವಧಿ ಬಾಳಿಕೆ ಬರಲು ಸಾಧ್ಯವೇ ಇರದ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಹೊರಡುವುದರಿಂದ ಜನರ ತೆರಿಗೆ ಹಣವನ್ನು ಕುಡಿಯುವ ನೀರಿನ ಯೋಜನೆ ಹೆಸರಲ್ಲಿ ಪೋಲು ಮಾಡುವುದು ಬಿಟ್ಟು ಬೇರೇನೂ ಸಾಧನೆಯಾಗುವುದಿಲ್ಲ. ಜೊತೆಗೆ ಕಿಂಡಿ ಅಣೆಕಟ್ಟಿನ ಆಸುಪಾಸಿನ ಪ್ರದೇಶಗಳ ಜನತೆಗೆ, ಕೃಷಿಕರಿಗೆ ಹೊಸ ಹೊಸ ಸಮಸ್ಯೆಗಳು ಉಂಟಾಗಲಿವೆಯಾದ್ದರಿಂದ ಈ ಯೋಜನೆಯನ್ನು ನಿಲುಗಡೆಗೊಳಿಸಲು ಒಕ್ಕೊರಳ ನಿರ್ಧಾರ ಮಾಡಲಾಯಿತು.
ಸಭೆಯಲ್ಲಿ ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಶೆಟ್ಟಿ, ಸದಸ್ಯರಾದ ಸುದರ್ಶನ ರಾವ್, ಮಣಿಪುರ ಗ್ರಾಪಂ ಸದಸ್ಯ ಸಂತೋಷ್ ಶೆಟ್ಟಿ, ಪ್ರವೀಣ್ ನೂಜಿ, ಉಡುಪಿ ಜಿಲ್ಲಾ ಕೃಷಿಕ ಸಂಘದ ರಾಮಕೃಷ್ಣ ಶರ್ಮ ಬಂಟಕಲ್ಲು, ಶ್ರೀನಿವಾಸ ಭಟ್ ಕುದಿ, ರವೀಂದ್ರ ಗುಜ್ಜರಬೆಟ್ಟು, ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ದಿನೇಶ್ ಶೆಟ್ಟಿ ಹೆರ್ಗ ಹಾಗೂ ಯೋಜನೆ ತಡೆೆ ಹೋರಾಟ ಸಮಿತಿ ಸಂಚಾಲಕ ರವಿ ಪೂಜಾರಿ ಕುರ್ಕಾಲು ಭಾಗವಹಿಸಿದ್ದರು.
ಸ್ಥಳೀಯರಾದ ಮಣಿರಾಜ, ನವೀನ್, ಶೌಕತ್ ಹುಸೈನ್ ಕುರ್ಕಾಲು, ಸಾಧು ಮಡಿವಾಳ, ಜೋಸೆಫ್ ಕುಂದರ್, ಸಂಪ ಪೂಜಾರಿ ಮಣಿಪುರ, ಕುರ್ಕಾಲು ಗ್ರಾಪಂನ ಮಾಜಿ ಅಧ್ಯಕ್ಷೆ ಶೋಭಾ, ಸೋಮಯ್ಯ ಕಾಂಚನ್, ಪದ್ಮ ಮೆಂಡನ್, ಪುಷ್ಪ, ಗೀತಾ ಮೊದಲಾದವರು ಉಪಸ್ಥಿತರಿದ್ದರು.