×
Ad

ಭೂಸ್ವಾಧೀನ: ಪರಿಹಾರಕ್ಕೆ ಆಗ್ರಹಿಸಿ ವಿಧಾನಸೌಧದ ಮುಂದೆ ಕರಪತ್ರ ಹಂಚಿ ರೈತರ ಪ್ರತಿಭಟನೆ

Update: 2022-03-24 19:35 IST

ಬೆಂಗಳೂರು, ಮಾ, 24: ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಟೊಯೋಟ ಕಾರ್ಖಾನೆಗಾಗಿ ಶಾನಮಂಗಳ, ಬಾನಂದೂರು, ಅಬ್ಬಿನಕುಂಟೆ ಗ್ರಾಮಗಳಲ್ಲಿ ವಶಪಡಿಸಿಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಸಂತ್ರಸ್ತ ರೈತರು ವಿಧಾನಸೌಧದ ಮುಂಭಾಗ ಸಾಂಕೇತಿಕವಾಗಿ ಕರಪತ್ರ ಹಂಚಿ ಪ್ರತಿಭಟನೆ ನಡೆಸಿದರು.

ಹಿರಿಯ ರೈತ ಪತ್ತಿ ಕುಮಾರಸ್ವಾಮಿ ನೇತೃತ್ವದಲ್ಲಿ ಭೂಮಿ ಕಳೆದುಕೊಂಡು ಪರಿಹಾರಕ್ಕಾಗಿ ಸುಮಾರು 20 ವರ್ಷಗಳಿಂದ ಕಾಯುತ್ತಿರುವ ರೈತರು ಈ ಸಂದರ್ಭದಲ್ಲಿ ಜನ ಸಾಮಾನ್ಯರು, ಪೊಲೀಸರು, ಅಧಿಕಾರಿಗಳಿಗೆ ಕರಪತ್ರ ಹಂಚಿ ಕೆಐಎಡಿಬಿ ಅಧಿಕಾರಿಗಳ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು.

ಕೆಐಎಡಿಬಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಪರಿಹಾರ ದೊರೆಯುವುದು ವಿಳಂಬವಾಗಿದೆ. ಸರಕಾರ ನ್ಯಾಯಾಲಯದ ಆದೇಶವನ್ನು ಪರಿಪಾಲಿಸಬೇಕು ಎಂದು ಈ ರೈತರು ಒತ್ತಾಯಿಸಿದರು.

ಪತ್ತಿ ಕುಮಾರಸ್ವಾಮಿ ಮಾತನಾಡಿ, ರೈತರಿಗೆ ಪರಿಹಾರ ಒದಗಿಸುವಲ್ಲಿ ಕೆಐಎಡಿಬಿ ನಿರ್ಲಕ್ಷ್ಯ ತೋರುತ್ತಿದೆ. ನಾವು ಬದುಕಿದ್ದಾಗಲೇ ಪರಿಹಾರ ದೊರೆತರೆ ನಮಗೆ ಸಮಾಧಾನವಾಗುತ್ತದೆ. ಕೆಐಎಡಿಬಿ ಜವಾಬ್ದಾರಿ ಹೊಂದಿರುವ ಭಾರೀ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ನಮ್ಮ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಮತ್ತೋರ್ವ ರೈತ ಅನಂತ್ ಮಾತನಾಡಿ, ಎ ಖರಾಬು ಭೂಮಿ ಹೊಂದಿರುವವರಿಗೆ ಪರಿಹಾರ ನೀಡಿ ಬಿ ಖರಾಬು ಭೂ ಮಾಲಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ ಸರಕಾರ ತಾರತಮ್ಯ ಮಾಡದೇ ಪರಿಹಾರ ನೀಡಲು ಮುಂದಾಗಬೇಕು. ಈ ಮೂಲಕವಾದರೂ ಹಿರಿಯ ಜೀವಗಳಿಗೆ ನೆಮ್ಮದಿ ಕೊಡಬೇಕು ಎಂದರು. 

ಕೆಐಎಡಿಬಿ ಈ ಭಾಗದಲ್ಲಿ 500 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಇದಕ್ಕೆ ಪರಿಹಾರ ಪಡೆಯಲು ಕೆಐಎಡಿಬಿ ಕಚೇರಿಗೆ ಸುಮಾರು ಎರಡು ದಶಕಗಳಿಂದ ಅಲೆದು, ಅಲೆದು ಬಸವಳಿದಿದ್ದಾರೆ. ಪರಿಹಾರ ಎಂಬುದು ಇವರಿಗೆ ಇನ್ನೂ ಮರೀಚಿಕೆಯಾಗಿ ಪರಿಣಮಿಸಿದೆ.

ಪರಿಹಾರ ನೀಡುವಂತೆ ರಾಮನಗರ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್‍ಗಳು ನೀಡಿದ ಆದೇಶಗಳಿಗೆ ಕೆಐಎಡಿಬಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ರೈತರ ಮನವಿಗೆ ಬೆಲೆ ನೀಡುತ್ತಿಲ್ಲ. ಇದರಿಂದಾಗಿ ಭೂಮಿ ಕಳೆದುಕೊಂಡ ರೈತರು ಕೆಐಎಡಿಬಿ ಕಚೇರಿಗೆ ಅಲೆದು ಅಲೆದು ಪರಿಹಾರದ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ.

ರಾಮನಗರ ನ್ಯಾಯಾಲಯವೂ ಭೂ ಮಾಲಕರ ನೈಜತೆಯನ್ನು ಪರಿಗಣಿಸಿ ಆದೇಶ ಜಾರಿ ಮಾಡಲು ಸುದೀರ್ಘ 10 ವರ್ಷ ತೆಗೆದುಕೊಂಡಿತು. 2013 ರಲ್ಲಿ ಸರಕಾರದ ನಿಯಮಾವಳಿಗಳಂತೆ ಪರಿಹಾರ ಬಿಡುಗಡೆ ಮಾಡಬೇಕು ಕೆಐಎಡಿಬಿಗೆ ಆದೇಶ ನೀಡಿತು.

ಆದರೆ ಇದನ್ನು ಪ್ರಶ್ನಿಸಿ ಕೆಐಎಡಿಬಿ ಹೈಕೋರ್ಟ್, ತರುವಾಯ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಆದರೆ ಈ ಮೇಲ್ಮನವಿ ಸಂದರ್ಭದಲ್ಲಿ ರಾಮನಗರ ನ್ಯಾಯಾಲಯ ನೀಡಿರುವ ಆದೇಶ ಕ್ರಮ ಬದ್ಧವಾಗಿದೆ. ತಕ್ಷಣವೇ ಪರಿಹಾರ ನೀಡುವಂತೆ ಆದೇಶಿಸಿತು. ಕೆಐಎಡಿಬಿ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಮನಗರ ನ್ಯಾಯಾಲಯ ಕೆಐಎಡಿಬಿಯನ್ನೇ ಅಟ್ಯಾಚ್‍ಮೆಂಟ್ ಮಾಡುವಂತೆ ಮತ್ತೊಂದು ಆದೇಶ ಹೊರಡಿಸಿತು. ಇಷ್ಟಾದರೂ ಕೆಐಎಡಿಬಿ ಅಧಿಕಾರಿಗಳು ಪರಿಹಾರ ನೀಡಲು ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ.

ಇವರೇನು ದೊಡ್ಡ ರೈತರಲ್ಲ. ಹತ್ತು ಗುಂಟೆ, ಇಪ್ಪತ್ತು ಗುಂಟೆ, ಒಂದು, ಎರಡು ಎಕರೆ ಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತರು. ಕೆಐಎಡಿಬಿಯಿಂದ ಈ ಭೂಮಿ ಟೊಯೋಟಾಗೆ ಹಸ್ತಾಂತರವಾಗಿದ್ದು, ಕೈಗಾರಿಕೆ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಕೈಗಾರಿಕಾಭಿವೃದ್ಧಿಗಾಗಿ ಭೂಮಿ ನೀಡಿದ ರೈತರು ಮಾತ್ರ ಸಂಕಷ್ಟದಲ್ಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News