×
Ad

ವ್ಯಾಪಾರಕ್ಕೆ ನಿರ್ಬಂಧ ಕಾನೂನು ಉಲ್ಲಂಘನೆ: ರಾಜ್ಯ ಬೀದಿಬದಿ ವ್ಯಾಪಾರಿ ಸಂಘಟನೆಗಳಿಂದ ಆಕ್ರೋಶ

Update: 2022-03-24 20:15 IST
ಡಾ. ಸಿ.ಈ. ರಂಗಸ್ವಾಮಿ

ಬೆಂಗಳೂರು, ಮಾ.24: ರಾಷ್ಟ್ರೀಯ ನಗರ ಮತ್ತು ಜೀವನೋಪಾಯ ಸಂರಕ್ಷಣೆ ಬೀದಿಬದಿ ವ್ಯಾಪಾರಿಗಳ ನಿಯಂತ್ರಣ ಅಧಿನಿಯಮ-2014 ಹಾಗೂ ರಾಜ್ಯ ಬೀದಿಬದಿ ವ್ಯಾಪಾರಿಗಳ ನಿಯಂತ್ರಣ-2019ರನ್ವಯ ಸಂತೆ, ಹಬ್ಬಗಳಲ್ಲಿ ಬೀದಿಬದಿ ವ್ಯಾಪಾರ ಮಾಡಲು ಅನುಮತಿ ಇದೆ. ಹಾಗಾಗಿ ಇತ್ತೀಚಿಗೆ ಮುಸ್ಲಿಂ ಸಮುದಾಯಕ್ಕೆ ಕೆಲವೊಂದು ಸ್ಥಳಗಳಲ್ಲಿ ಬೀದಿಬದಿ ವ್ಯಾಪಾರಕ್ಕೆ ನಿರ್ಬಂಧ ಹೇರುತ್ತಿರುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಖಂಡಿಸಿದೆ. 

ಗುರುವಾರದಂದು ಪ್ರೆಸ್‍ಕ್ಲಬ್‍ನಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಸಿ.ಈ. ರಂಗಸ್ವಾಮಿ ಮಾತನಾಡಿ, ಬೀದಿಬದಿ ವ್ಯಾಪಾರವನ್ನು ತೆರವುಗೊಳಿಸುವುದು ಕಾನೂನಿನ ಚೌಕಟ್ಟಿನಲ್ಲಿ ಬರುವುದಿಲ್ಲ. ಕಾನೂನನ್ನು ಉಲ್ಲಂಘಿಸಿ, ಮುಸ್ಲಿಂ ಸಮುದಾಯದ ಬೀದಿಬದಿ ವ್ಯಾಪಾರಿಗಳಿಗೆ ನಿರ್ಬಂಧವೇರುತ್ತಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯದ ಕುಟುಂಬಗಳು ಬೀದಿಪಾಲಾಗುತ್ತವೆ. ಈ ಕುರಿತು ಒಕ್ಕೂಟಕ್ಕೆ ದೂರುಗಳು ಬಂದಿದ್ದು, ಸರಕಾರದ ಗಮನಕ್ಕೆ ತರಲಾಗಿದೆ. ಸರಕಾರವು ಸಮಸ್ಯೆಯನ್ನು ಬಗೆಹರಿಸಿ ಬೀದಿಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಮನವಿ ಮಾಡಿದರು. 

ಬೀದಿಬದಿ ವ್ಯಾಪಾರದಲ್ಲಿ ಧರ್ಮ ಮುಖ್ಯವಲ್ಲ, ಹಣ ಇಲ್ಲದೆ ಇರುವವರು ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿರುತ್ತಾರೆ ಎಂದು ಮೊದಲು ತಿಳಿದುಕೊಳ್ಳಬೇಕು. ಅವರಿಗೆ ಕಿರುಕುಳ ಕೊಡುವುದು ಸರಿಯಲ್ಲ. ಸರಕಾರವು ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕೆ ಹೊರತು, ಬೀದಿಬದಿ ವ್ಯಾಪಾರವನ್ನು ಕೀಳುಮಟ್ಟಕ್ಕೆ ತರಬಾರದು ಎಂದ ಅವರು, ಬೀದಿಬದಿ ವ್ಯಾಪಾರವನ್ನು ನಿರ್ಬಂಧಿಸಿದರೆ, ಒಕ್ಕೂಟವು ಬೃಹತ್ ಪ್ರತಿಭಟನೆಗೆ ಕರೆ ನೀಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಸ್ಲಿಂ ಸಮುದಾಯವಿರುವ ಕಡೆಗಳಲ್ಲಿ ಹಿಂದೂ ಬೀದಿಬದಿಯ ವ್ಯಾಪಾರಿಗಳೂ ಇದ್ದಾರೆ, ಅದರಂತೆ ಹಿಂದು ಸಂತೆಗಳಲ್ಲಿ ಮುಸ್ಲಿಂ ಸಮುದಾಯದ ಬೀದಿಬದಿಯ ವ್ಯಾಪಾರಿಗಳು ಇದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು. ದೇವಾಲಯ ವ್ಯಾಪ್ತಿಯಲ್ಲಿ ಮಾಂಸ ಸೇರಿದಂತೆ ಕೆಟ್ಟದ್ದನ್ನು ಮಾರಿದರೆ ತಪ್ಪಾಗುತ್ತದೆ. ಆದರೆ ಚಪ್ಪಲಿಗಳನ್ನು ಮಾರಿದರೆ ತಪ್ಪಾಗುವುದಿಲ್ಲ. ಪಾದಯಾತ್ರೆ ಬಂದವರು ಯಾತ್ರೆ ಮುಗಿಸಿ, ಚಪ್ಪಲಿ ತೆಗೆದುಕೊಳ್ಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News