ಮೆಟ್ರೋ ಯೋಜನೆಯಿಂದಾಗಿ 43 ಕಿವುಡ, ಮೂಗ ಮಕ್ಕಳ ಭವಿಷ್ಯ ಅಂಧಕಾರದಲ್ಲಿ: ಆರೋಪ

Update: 2022-03-24 16:47 GMT

ಬೆಂಗಳೂರು, ಮಾ.24: 2017ರಲ್ಲಿ ಬಿಎಂಆರ್‍ಸಿಎಲ್ ರೀಚ್ 6 ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭ ಮಾಡಿದಾಗ ಬಂಬೂ ಬಝಾರ್ ಬಳಿ ಇದ್ದಂತಹ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಫಾರ್ ಡೆಫ್(ಟಿಟಿಸಿಡಿ)ಯ ಕಟ್ಟಡ ನೆಲಸಮಗೊಂಡಿತು. ಇದರಿಂದ 43 ಮಂದಿ ಕಿವುಡ, ಮೂಗ ಮಕ್ಕಳ ಭವಿಷ್ಯ ಅಂಧಕಾರದಲ್ಲಿ ಮುಳುಗುವಂತಾಯಿತು ಎಂಬ ಆರೋಪ ಕೇಳಿ ಬಂದಿದೆ.

ಭೂ ಸ್ವಾಧೀನ ಪ್ರಕ್ರಿಯೆಯಿಂದಾಗಿ 2017ರ ನವೆಂಬರ್‍ನಲ್ಲಿ ಟಿಟಿಸಿಡಿಯ ಕಟ್ಟಡ ನೆಲಸಮಗೊಂಡಿದ್ದರಿಂದ ಬಿಎಂಆರ್‍ಸಿಎಲ್‍ನವರು ಗೌಸಿಯಾ ಐಟಿಐ ಕಾಲೇಜಿನಲ್ಲಿ ಈ ಮಕ್ಕಳಿಗೆ ತರಬೇತಿ ನೀಡುವುದಾಗಿ ತಿಳಿಸಿದ್ದರು. ಆದರೆ, ಸಂಜ್ಞೆ ಭಾಷೆಯನ್ನು ತರಬೇತಿ ನೀಡುವ ಶಿಕ್ಷಕರ ಲಭ್ಯತೆ ಇಲ್ಲದೆ ಇದ್ದಿದ್ದರಿಂದ ಮಕ್ಕಳಿಗೆ ತರಬೇತಿಯೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ, ಮಕ್ಕಳಿಗೆ ವಾಗ್ದಾನ ಮಾಡಿದ್ದ ಬಿಎಂಆರ್‍ಸಿಎಲ್‍ನವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರು ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ನವೆಂಬರ್ 2020ರಲ್ಲಿ ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವರ ಹಾಲ್ ಟಿಕೆಟ್‍ಗಳೆ ಲಭ್ಯವಾಗಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮಾಡಿದ್ದರು.

2021ರಲ್ಲಿ ಈ ಮಕ್ಕಳು ಗ್ರೋಥ್ ವಾಚ್ ಸ್ವಯಂ ಸೇವಾ ಸಂಸ್ಥೆಯ ನೆರವಿನೊಂದಿಗೆ ಪೂರಕ ಪರೀಕ್ಷೆಗಳನ್ನು ಕೈಗೊಂಡರು. ಆದರೆ, ಮೂರು ವರ್ಷಗಳಿಂದ ತರಬೇತಿಯೆ ಇಲ್ಲದೆ ಇರುವ ಈ ಮಕ್ಕಳು ಪರೀಕ್ಷೆಗಳನ್ನು ಬರೆಯುವಷ್ಟು ಶಕ್ತರಾಗಿರಲಿಲ್ಲ. ಸಾವಿರಾರು ಕೋಟಿ ರೂ.ಗಳ ಮೆಟ್ರೋ ಯೋಜನೆಯನ್ನು ಕೈಗೆತ್ತಿಕೊಳ್ಳುವ ಬಿಎಂಆರ್‍ಸಿಎಲ್ ಈ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರು ಹಾಗೂ ಅಗತ್ಯ ಸೌಲಭ್ಯಗಳನ್ನು ಕೊಡಲು ಮನಸ್ಸು ಮಾಡದೆ ಇರುವುದು ಏಕೆ ಎಂಬುದು ಮಕ್ಕಳ ಪೋಷಕರ ಪ್ರಶ್ನೆಯಾಗಿದೆ.

ಮಾ.12ರಂದು ಈ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಆದರೆ, ಸೂಕ್ತ ತರಬೇತಿ ಇಲ್ಲದೆ ಇದ್ದಿದ್ದರಿಂದ ಅವರು ಉತ್ತೀರ್ಣರಾಗುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಪೋಷಕರು ಹೇಳುತ್ತಿದ್ದಾರೆ. ಆದುದರಿಂದ, ಬಿಎಂಆರ್‍ಸಿಎಲ್‍ನವರು ಈ 43 ಮಕ್ಕಳಿಗೆ ತರಗತಿಗಳನ್ನು ಆಯೋಜಿಸಿ, ತರಬೇತಿ ನೀಡಿ, ಪರೀಕ್ಷೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ನೀಡಬೇಕು ಎಂದು ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News