‘ದಿ ಕಾಶ್ಮೀರ್ ಫೈಲ್ಸ್’ನ ಕೋಮುವಾದಿ ಪ್ರತಿಪಾದನೆಗಳನ್ನು ಕಾಶ್ಮೀರಿ ಪಂಡಿತರು ಒಪ್ಪುತ್ತಿದ್ದಾರೆಯೇ?

Update: 2022-03-25 06:44 GMT

ವಿವಿಧ ಕಾಶ್ಮೀರಿ ಪಂಡಿತರ ಸಂದರ್ಶನಗಳನ್ನು ಒಳಗೊಂಡಿರುವ ಬಿಬಿಸಿ ವರದಿಯೊಂದು ಸಮುದಾಯವು ಚಿತ್ರದಿಂದ ಪ್ರಭಾವಿತಗೊಂಡಿಲ್ಲ ಎನ್ನುವುದನ್ನು ತೋರಿಸಿದೆ. ವಾಸ್ತವಗಳನ್ನು ಮಿಶ್ರಗೊಳಿಸಿದ್ದಕ್ಕಾಗಿ ಅಥವಾ ಕೈಬಿಟ್ಟಿದ್ದಕ್ಕಾಗಿ ಹಲವರು ಚಿತ್ರವನ್ನು ಖಂಡಿಸಿದ್ದರೆ, ಮುಸ್ಲಿಮ್ ಮತ್ತು ಸಿಖ್ ಸಮುದಾಯಗಳು ಅನುಭವಿಸಿದ್ದ ಹಿಂಸೆಗಳನ್ನು ಚಿತ್ರವು ಏಕೆ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಪ್ರಶ್ನಿಸಿದ್ದಾರೆ.

1980ರ ದಶಕದ ಉತ್ತರಾರ್ಧದಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ಅನಿವಾರ್ಯ ಸ್ಥಿತಿಯಲ್ಲಿ ತಮ್ಮ ಮನೆಗಳನ್ನು ತೊರೆದಿದ್ದ ಕಾಶ್ಮೀರಿ ಪಂಡಿತರ ದೂರುದುಮ್ಮಾನಗಳನ್ನು ಅಭಿವ್ಯಕ್ತಿಸಿರುವುದಕ್ಕಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಬಲಪಂಥೀಯ ಮಾಧ್ಯಮಗಳು ತುಂಬ ಉತ್ಸಾಹದಿಂದ ಬಣ್ಣಿಸುತ್ತಿವೆ. ಇದೇ ವೇಳೆ ಕಾಶ್ಮೀರಿ ಪಂಡಿತ ಸಮುದಾಯವು ಚಿತ್ರದ ಸಂಭವನೀಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಹಲವಾರು ಸಲ ಭೀತಿಯನ್ನು ವ್ಯಕ್ತಪಡಿಸಿದೆ.

‘ದಿ ಕಾಶ್ಮೀರ್ ಫೈಲ್ಸ್’ 1989ರ ಸುಮಾರಿಗೆ ಕಾಶ್ಮೀರಿ ಪಂಡಿತರ ದುರವಸ್ಥೆಯನ್ನು ಎತ್ತಿ ತೋರಿಸುವ ಕಥೆಯನ್ನು ನಿರೂಪಿಸಿದೆ. ಆದಾಗ್ಯೂ ಸಮತೋಲಿತ ವಿಮರ್ಶೆಗಳು ಬರುತ್ತಿದ್ದು, ಆ ಸಮಯದಲ್ಲಿ ಸಿಖ್ ಮತ್ತು ಮುಸ್ಲಿಮ್ ಸಮುದಾಯಗಳೂ ಬಹಳವಾಗಿ ನರಳಿದ್ದವು ಮತ್ತು ಚಿತ್ರವು ಈ ಸಮುದಾಯಗಳನ್ನು ನಿರ್ಲಕ್ಷಿಸಿ ಕೇವಲ ಹಿಂದೂಗಳ ಸ್ಥಿತಿಯ ಮೇಲೆ ಗಮನವನ್ನು ಕೇಂದ್ರೀಕರಿಸಲು ಹಲವಾರು ಅಂಶಗಳು ಮತ್ತು ಸೂಕ್ಷ್ಮ ವ್ಯತ್ಯಾಸಗಳಿಗೆ ಹೆಚ್ಚಿನ ಆದ್ಯತೆ ನೀಡಿರುವಂತೆ ಕಂಡುಬರುತ್ತಿದೆ. ಇನ್ನೂ ಕೆಟ್ಟದ್ದೆಂದರೆ ಬಂಡಾಯವನ್ನು ಪಾಕಿಸ್ತಾನವು ಪ್ರಾಯೋಜಿಸಿತ್ತಾದರೂ ಅದಕ್ಕಾಗಿ ಚಲನಚಿತ್ರವು ಸಂಪೂರ್ಣವಾಗಿ ಭಾರತೀಯ ಮುಸ್ಲಿಮರನ್ನು ದೂಷಿಸಿದೆ!

ತೀರ ಇತ್ತೀಚೆಗೆ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘‘ಸಾಮೂಹಿಕ ನಿರ್ಗಮನದ ಸಮಯದಲ್ಲಿ 4,000 ಕಾಶ್ಮೀರಿ ಪಂಡಿತರು ಕೊಲ್ಲಲ್ಪಟ್ಟಿದ್ದರು’’ ಎಂದು ಹೇಳಿದ್ದರು, ಆದರೆ ಈ ಸಂಖ್ಯೆಯನ್ನು ದೃಢೀಕರಿಸುವ ಯಾವುದೇ ದಾಖಲೆಯನ್ನು ಅವರು ಮುಂದಿಟ್ಟಿರಲಿಲ್ಲ. ಸಮಯ ಕಳೆದಂತೆ ಆರ್‌ಟಿಐ ವಿಚಾರಣೆಗಳು, ಉಗ್ರಗಾಮಿ ಸಂಘಟನೆಗಳು ಮತ್ತು ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿ (ಕೆಪಿಎಸ್‌ಎಸ್)ಯ ಅನಧಿಕೃತ ಮಾಹಿತಿಗಳು ಹೇಗೆ 219ರಿಂದ (ಅಧಿಕೃತ ಮಾಹಿತಿ) 650 (ಕೆಪಿಎಸ್‌ಎಸ್‌ನ ಅನಧಿಕೃತ ಮಾಹಿತಿ)ರಷ್ಟು ಕಾಶ್ಮೀರಿ ಪಂಡಿತರ ಸಾವುಗಳು ಸಂಭವಿಸಿದ್ದವು ಎನ್ನುವುದನ್ನು ಬೆಳಕಿಗೆ ತಂದಿವೆ. ಆದರೆ ಸಾವಿರಾರು ಸಂಖ್ಯೆಯಲ್ಲಿ ಕಾಶ್ಮೀರಿ ಪಂಡಿತರ ಸಾವುಗಳು ಸಂಭವಿಸಿದ್ದವು ಎನ್ನುವುದನ್ನು ಯಾವುದೇ ಮೂಲವು ಎಂದೂ ಉಲ್ಲೇಖಿಸಿರಲಿಲ್ಲ.

‘ಕಾಶ್ಮೀರನಾಮಾ’ ಲೇಖಕ ಅಶೋಕ್ ಕುಮಾರ್ ಪಾಂಡೆ ಅವರೂ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಚಿತ್ರದಲ್ಲಿ ಇತಿಹಾಸದ ಚಿತ್ರಣವನ್ನು ಟೀಕಿಸಿ ಅವರು ಅರ್ಧ ಗಂಟೆ ಅವಧಿಯ ವೀಡಿಯೊವೊಂದನ್ನು ಯೂ ಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ನಲ್ಲಿ ‘ಅಲ್ ಸಫಾ’ ವೃತ್ತಪತ್ರಿಕೆಯನ್ನು ಭಯೋತ್ಪಾದನೆಯ ಬೆಂಬಲಿಗ ಎಂದು ಬಣ್ಣಿಸಿರುವ ಬಗ್ಗೆಯೂ ಪಾಂಡೆ ಮಾತನಾಡಿದ್ದಾರೆ. ವಾಸ್ತವದಲ್ಲಿ ವೃತ್ತಪತ್ರಿಕೆಯ ಸಂಪಾದಕ ಶಬನ್ ವಕೀಲ್ ಅವರನ್ನು 1991, ಮಾ.23ರಂದು ಭಯೋತ್ಪಾದಕರು ಹತ್ಯೆ ಮಾಡಿದ್ದರು. ಇದಕ್ಕೂ ಮುನ್ನ, ಸಾಮೂಹಿಕ ವಲಸೆಯ ಒಂದು ವರ್ಷದ ಬಳಿಕ 1990, ಸೆ.22ರಂದು 23 ಕಾಶ್ಮೀರಿ ಪಂಡಿತರು ವಕೀಲ್ ಅವರಿಗೆ ಜಂಟಿ ಪತ್ರವೊಂದನ್ನು ಬರೆದಿದ್ದರು. ಸಾಮೂಹಿಕ ನಿರ್ಗಮನವು ಯೋಜಿತ ಪಿತೂರಿಯಾಗಿತ್ತು ಎಂದು ಅವರು ಪತ್ರದಲ್ಲಿ ಆರೋಪಿಸಿದ್ದರು. ರಾಜ್ಯಪಾಲ ಜಗಮೋಹನ್ ಅವರು ರಾಜ್ಯ ಆಡಳಿತದೊಂದಿಗೆ ಶಾಮೀಲಾಗಿ ಬಿಜೆಪಿ, ಆರೆಸ್ಸೆಸ್ ಮತ್ತು ಶಿವಸೇನೆಯಂತಹ ಹಿಂದೂ ಕೋಮುವಾದಿ ಸಂಘಟನೆಗಳ ಲಾಭಕ್ಕಾಗಿ ಸಮುದಾಯವನ್ನು ಬಲಿಪಶುವನ್ನಾಗಿ ಮಾಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದರು. ಕಾಶ್ಮೀರಿ ಪಂಡಿತ ಸಮುದಾಯದ ಕೆಲವು ಸ್ವಘೋಷಿತ ನಾಯಕರು ತೊಂದರೆಯನ್ನು ಸೃಷ್ಟಿಸುವವರೆಗೂ ಹಿಂದೂ ಮತ್ತು ಮುಸ್ಲಿಮ್‌ಸಮುದಾಯಗಳು ನೆರೆಹೊರೆಯವರಂತೆ ಸೌಹಾರ್ದ ಮತ್ತು ಸಂತೋಷದಿಂದ ಬದುಕಿದ್ದವು ಎಂದೂ ಅವರು ಪತ್ರದಲ್ಲಿ ಹೇಳಿದ್ದರು.

ಚಿತ್ರವು ಕಾಶ್ಮೀರಿ ಸಮುದಾಯವನ್ನು ಆಧರಿಸಿದೆ ಮತ್ತು ಇದೇ ಸಮುದಾಯವು ಈ ಪತ್ರವನ್ನು ಬರೆದಿತ್ತು ಎನ್ನುವುದನ್ನು ಪರಿಗಣಿಸಿದರೆ ಚಿತ್ರವು ಕಾಶ್ಮೀರದಲ್ಲಿ ವಾಸವಾಗಿರುವ ಹಿಂದೂಗಳಲ್ಲಿ ತಾವು ಅಸುರಕ್ಷಿತರು ಎಂಬ ಭಾವನೆಯನ್ನು ಮೂಡಿಸಿದೆ ಎಂದು ಕೆಪಿಎಸ್‌ಎಸ್ ಹೇಳಿರುವುದರಲ್ಲಿ ಅಚ್ಚರಿಯಿಲ್ಲ.

ಸಂದರ್ಶನವೊಂದರಲ್ಲಿ ಮಾತನಾಡಿದ ಕೆಪಿಎಸ್‌ಎಸ್ ಅಧ್ಯಕ್ಷ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಸಂಜಯ ಟಿಕೂ ಅವರು, ಕಾಶ್ಮೀರದಲ್ಲಿ ಯಾವುದೇ ಪಾಲನ್ನು ಹೊಂದಿರದ ಕಾಶ್ಮೀರಿ ಪಂಡಿತರೇತರರಿಂದ ಸೃಷ್ಟಿಯಾಗಿರುವ ದ್ವೇಷದ ಹರಡುವಿಕೆಗಾಗಿ ಸರಕಾರವನ್ನು ದೂಷಿಸಿದರು. ಹಲವಾರು ಟೀಕೆಗಳ ನಡುವೆ ಅವರು ಚಿತ್ರವು ಹೇಗೆ ದಾಳಿಗಳಿಗೂ 370ನೇ ವಿಧಿಯ ರದ್ದತಿಗೂ ನಂಟು ಕಲ್ಪಿಸಿದೆ ಮತ್ತು ಮುಸ್ಲಿಮರನ್ನು ಜಿಹಾದಿಗಳನ್ನಾಗಿ ಬಿಂಬಿಸಿದೆ ಎನ್ನುವುದನ್ನು ಬೆಟ್ಟು ಮಾಡಿದರು.

ಇದಲ್ಲದೆ ವಿವಿಧ ಕಾಶ್ಮೀರಿ ಪಂಡಿತರ ಸಂದರ್ಶನಗಳನ್ನು ಒಳಗೊಂಡಿರುವ ಬಿಬಿಸಿ ವರದಿಯೊಂದು ಸಮುದಾಯವು ಚಿತ್ರದಿಂದ ಪ್ರಭಾವಿತಗೊಂಡಿಲ್ಲ ಎನ್ನುವುದನ್ನು ತೋರಿಸಿದೆ. ವಾಸ್ತವಗಳನ್ನು ಮಿಶ್ರಗೊಳಿಸಿದ್ದಕ್ಕಾಗಿ ಅಥವಾ ಕೈಬಿಟ್ಟಿದ್ದಕ್ಕಾಗಿ ಹಲವರು ಚಿತ್ರವನ್ನು ಖಂಡಿಸಿದ್ದರೆ, ಮುಸ್ಲಿಮ್ ಮತ್ತು ಸಿಖ್ ಸಮುದಾಯಗಳು ಅನುಭವಿಸಿದ್ದ ಹಿಂಸೆಗಳನ್ನು ಚಿತ್ರವು ಏಕೆ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಪ್ರಶ್ನಿಸಿದ್ದಾರೆ.

2024ರ ಚುನಾವಣೆಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ರಾಜಕೀಯ ಗಿಮಿಕ್ ಆಗಿ ಬಳಸಲು ರಾಜಕಾರಣಿಗಳು ಚಿತ್ರವನ್ನು ಹೊಗಳುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ. ಕೆಲವರಂತೂ ಸಾಮೂಹಿಕ ವಲಸೆ ಮತ್ತು ಬಂಡಾಯದ ನಿಜವಾದ ಭಯಾನಕತೆಯನ್ನು ತೋರಿಸುವ ಹೆಚ್ಚು ಸೂಕ್ಷ್ಮವಾದ ಚಿತ್ರವೊಂದನ್ನು ನಿರ್ಮಿಸುವಂತೆ ಇತರ ನಿರ್ದೇಶಕರನ್ನು ಕೋರಿದ್ದಾರೆ.
ತನ್ನ ಕೋಮುವಾದಿ ಭಾವನೆಗಳಿಗಾಗಿ ಚಿತ್ರವನ್ನು ಹಲವಾರು ಚಿತ್ರ ವಿಮರ್ಶಕರು ಟೀಕಿಸಿದ್ದಾರಾದರೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಚಿವರು ಸಮಾನವಾಗಿ ಅನುಮೋದಿಸಿದ್ದಾರೆ.

ಬೇರೆ ಆಯ್ಕೆಯಿಲ್ಲದೆ ಕಾಶ್ಮೀರಿ ಪಂಡಿತ ಸಮುದಾಯವು ಪ್ರಶ್ನೆಯಲ್ಲಿರುವ ಎರಡು ಸಮುದಾಯಗಳ ನಡುವೆ ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳುವ ಮತ್ತು ಚಿತ್ರವು ಸೃಷ್ಟಿಸಿರುವ ದ್ವೇಷವನ್ನು ನಿರುತ್ತೇಜಿಸುವ ಹೊಣೆಯನ್ನು ಸ್ವಯಂ ಹೊತ್ತುಕೊಂಡಿದೆ. ಚಿತ್ರದ ಹಾನಿಕಾರಕ ಪರಿಣಾಮಕ್ಕಾಗಿ ಚಿತ್ರಮಂದಿರಗಳಲ್ಲಿ ಅದನ್ನು ಖಂಡಿಸುತ್ತಿರುವ ಕಾಶ್ಮೀರಿ ಪಂಡಿತರನ್ನು ಕೆಲವು ವೀಡಿಯೊಗಳು ತೋರಿಸಿವೆ.

Writer - ಕೃಪೆ: sabrangindia.in

contributor

Editor - ಕೃಪೆ: sabrangindia.in

contributor

Similar News