ಕೆಎಎಸ್‌ ಅಧಿಕಾರಿ ರಂಗನಾಥ್‌ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

Update: 2022-03-25 05:18 GMT

ಬೆಂಗಳೂರು, ಮಾ.25: ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಸರಕಾರಿ ಜಮೀನುಗಳನ್ನು ಅಕ್ರಮವಾಗಿ ಪರಭಾರೆ ಮಾಡಿಕೊಟ್ಟಿರುವ ಆರೋಪ ಎದುರಿಸುತ್ತಿರುವ, ಪ್ರಸಕ್ತ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿರುವ ಕೆಎಎಸ್‌ ಅಧಿಕಾರಿ ಕೆ. ರಂಗನಾಥ್‌ ಮನೆ, ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಂದು ಬೆಳಗ್ಗೆ ದಾಳಿ ನಡೆಸಿದೆ.

ಎಸಿಬಿ ಬೆಂಗಳೂರು ನಗರ ಠಾಣೆಯ ಒಟ್ಟು 42 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡಿರುವ ಐದು ತಂಡಗಳು ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸುತ್ತಿದೆ.  ನ್ಯಾಯಾಂಗ ಬಡಾವಣೆಯಲ್ಲಿರುವ ರಂಗನಾಥ್‌ ಅವರ ಮನೆ, ದೊಡ್ಡಬಳ್ಳಾಪುರ ಪಟ್ಟಣದ ದತ್ತಾತ್ರೇಯ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಮನೆ, ಅಲ್ಲಿನ ಕನಕ ಟ್ರಸ್ಟ್‌ ಕಚೇರಿ, ಅಕ್ಷರ ಪಬ್ಲಿಕ್‌ ಶಾಲೆ ಹಾಗೂ ಬೆಂಗಳೂರಿನ ನಾಗರಭಾವಿಯಲ್ಲಿರುವ ಸಂಬಂಧಿಕರ ಮನೆಗಳಲ್ಲಿ ಶೋಧ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ರಂಗನಾಥ್ ಅವರು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಹುದ್ದೆಯಲ್ಲಿದ್ದ ಅವಧಿಯ ಕೇವಲ ಮೂರು ದಿನಗಳಲ್ಲಿ ಗೋಮಾಳ/ಸರಕಾರದ ಸುಪರ್ದಿಯಲ್ಲಿದ್ದ ಜಮೀನಿಗೆ ಸಂಬಂಧಿಸಿದಂತೆ ಮೂಲ ಮಂಜೂರಾತಿ ದಾಖಲೆಗಳ ನೈಜತೆಯನ್ನು ಪರಿಶೀಲನೆ ಮಾಡದೇ, ಸಂಬಂಧಪಟ್ಟ ತಹಶೀಲ್ದಾರ್‍ ಅವರಿಂದ ಯಾವುದೇ ವರದಿಯನ್ನು ಪಡೆಯದೆಯೇ ನಿಯಮಬಾಹಿರವಾಗಿ, ಭೂಮಾಫಿಯಾದವರೊಂದಿಗೆ ಶಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಜಮೀನಿನ ಪರಭಾರೆ ಮಾಡಿಕೊಟ್ಟಿರುವ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತಂತೆ ಕಾನೂನು ಕ್ರಮಕ್ಕೆ ಸರಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಎಸಿಬಿ ಬೆಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದರಂತೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News