×
Ad

ಗುಣಮಟ್ಟದ ಜೀವನಕ್ಕೆ ಫಿಸಿಯೋಥೆರಪಿ ಪೂರಕ: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್

Update: 2022-03-25 14:53 IST

ಮಂಗಳೂರು, ಮಾ.24: ಪ್ರಕೃತಿಯ ಸುಂದರ ಕೊಡುಗೆ ಮಾನವ ಜೀವನ. ಜ್ಞಾನಭರಿತ ಗುಣಮಟ್ಟದ ಜೀವನ ಪ್ರಮುಖವಾಗಿದ್ದು, ಇದಕ್ಕೆ ಫಿಸಿಯೋಥೆರಪಿ ಪೂರಕ ಎಂದು ಕೇರಳ ರಾಜ್ಯಪಾಲದ ಆರಿಫ್ ಮುಹಮ್ಮದ್ ಖಾನ್ ಅಭಿಪ್ರಾಯಿಸಿದ್ದಾರೆ.

ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ದಕ್ಷಿಣ ಕನ್ನಡ ಫಿಸಿಯೋಥೆರಪಿ ಬೋಧಕರ ಸಂಘದ ವತಿಯಿಂದ ಆಯೋಜಿಸಲಾಗಿರುವ ಮಂಗಳೂರು ಫಿಸಿಯೋಕಾನ್ 2022- ಅಂತರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನಕ್ಕೆ ಇಂದು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಜ್ಞಾನ ಹಾಗೂ ಗುಣಮಟ್ಟದ ಜೀವನ ಶಿಕ್ಷಣದಿಂದ ಮಾತ್ರ ಸಾಧ್ಯ. ನೈಜವಾದ ಬದಲಾವಣೆ ಕೂಡಾ ಶಿಕ್ಷಣದಿಂದ ಮಾತ್ರವೇ ಸಾಧ್ಯ. ಜ್ಞಾನ, ಮಾಹಿತಿಯ ಯುಗದಲ್ಲಿ ಜೀವಿಸುತ್ತಿರುವ ನಾವಿಂದು ಪ್ರಕೃತಿ ನೀಡಿರುವ ಸುಂದರ ಜೀವನಕ್ಕೆ ಪ್ರತಿ ಹಂತದಲ್ಲೂ ಮೇಲ್ದರ್ಜೆಗೇರುವುದು ಅತೀ ಅಗತ್ಯ. ಈ ನಿಟ್ಟಿನಲ್ಲಿ ಫಿಸಿಯೋಥೆರಪಿ ಕ್ಷೇತ್ರವೂ ಪ್ರತಿ ಹಂತದಲ್ಲೂ ಮೇಲ್ದರ್ಜೆಗೇರಬೇಕಾಗಿದೆ ಎಂದವರು ಅಭಿಪ್ರಾಯಿಸಿದರು.

ಹೆಣ್ಣು ಮಕ್ಕಳ ಸಬಲೀಕರಣ ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಗಿದ್ದು, ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ಕೇರಳಲ್ಲಿ ತಾನು ಭಾಗವಹಿಸಿದ ನಾಲ್ಕು ವಿಶ್ವವಿದ್ಯಾನಿಲಯಗಳಲ್ಲಿ ಮೂರು ವಿವಿಗಳ ಘಟಿಕೋತ್ಸವದಲ್ಲಿ ಚಿನ್ನದ ಪದಕ ಹಾಗೂ ರ‍್ಯಾಂಕ್ ಪಡೆದವರಲ್ಲಿ ಶೇ. 73ರಷ್ಟು ವಿದ್ಯಾರ್ಥಿಗಳು ಹೆಣ್ಣು ಮಕ್ಕಳು ಎಂಬುದು ಗಮನಾರ್ಹ ಸಂಗತಿ. ಇದಲ್ಲದೆ ವಯನಾಡ್‌ನ ಪಶು ವೈದ್ಯಕೀಯ ವಿವಿಯ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ 23 ವಿದ್ಯಾರ್ಥಿಗಳಲ್ಲಿ ಓರ್ವ ಮಾತ್ರ ಪುರುಷ ವಿದ್ಯಾರ್ಥಿಯಾಗಿರುವುದು ಮಹಿಳೆ ಸಬಲೀಕರಣಗೊಳ್ಳುತ್ತಿರುವ ವೇಗವನ್ನು ದೃಢಪಡಿಸಿದೆ. ಇಂದು ಫಿಸಿಯೋಥೆರಪಿ ಸಮ್ಮೇಳನದಲ್ಲಿಯೂ ಅತ್ಯುನ್ನತ ಅಂಕ ಪಡೆದು ಸನ್ಮಾನಗೊಂಡ ಮೂವರೂ ವಿದ್ಯಾರ್ಥಿನಿಯರು ಎನ್ನುವುದು ಉಲ್ಲೇಖನೀಯವಾಗಿದ್ದು, ಮಹಿಳೆಯರನ್ನು ಶಿಕ್ಷಣ, ಹೊರ ಜಗತ್ತಿನಿಂದ ಹಿಂದಕ್ಕೆ ತಳ್ಳುತ್ತಿರುವವರು ಈ ಬಗ್ಗೆ ಆಲೋಚನೆ ಮಾಡಬೇಕಾಗಿದೆ ಎಂದವರು ಹೇಳಿದರು.

ನಮ್ಮ ಜೀವನದಲ್ಲಿ ನಾವು ಹೇಗೆ ಬೇಕಾದರೂ ಜೀವಿಸಬಹುದು, ಅದು ನಮಗೆ ಬಿಟ್ಟಿದ್ದು, ಆದರೆ ನಮ್ಮಿಂದ ಯಾರಿಗೂ ತೊಂದರೆಯಾಗದಂತೆ ಜೀವಿಸುವುದು ಮಾನವೀಯತೆ. ಅದನ್ನು ನಾವು ಬೆಳೆಸಿಕೊಳ್ಳಬೇಕು. ಫಿಸಿಯೋಥೆರಪಿಸ್ಟ್‌ಗಳಲ್ಲಿ ಈ ಮನೋಭಾವನೆ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

ಫಿಸಿಯೋಥೆರಪಿಸ್ಟ್‌ಗಳು ಸಮಾಜದ ಆಧುನಿಕ ಸುಶ್ರೂಷಕರು: ಡಾ.ಸುಧಾಕರ್

ಫಿಸಿಯೋಥೆರಪಿಸ್ಟ್‌ಗಳು ಸಮಾಜದ ಆಧುನಿಕ ಶುಶ್ರೂಷಕರಾಗಿದ್ದು, ದೇಶದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಫಿಸಿಯೋಥೆರಪಿಸ್ಟ್‌ಗಳ ಕೊರತೆ ಇದ್ದು, ಅದನ್ನು ನೀಗಿಸುವ ಪ್ರಯತ್ನ ಆಗಬೇಕಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 19ನೇ ಶತಮಾನದಿಂಚೀಚೆಗೆ ವಿಶ್ವಕ್ಕೆ ಫಿಸಿಯೋಥೆರಪಿಯ ಮಹತ್ವ ಅರಿವಾಗಿದ್ದರೆ, ಭಾರತವು ಪಂಚಕರ್ಮ, ಅಭ್ಯಂಗಸ್ನಾನದಂತಹ ಚಟುವಟಿಕೆಗಳ ಮೂಲಕ ಹಿಂದಿನಿಂದಲೂ ಫಿಸಿಯೋಥೆರಪಿ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದೆ ಎಂದವರು ಹೇಳಿದರು.

ಅಮೆರಿಕದಲ್ಲಿ 10,000 ಜನಸಂಖ್ಯೆಗೆ ಏಳು ಮಂದಿ ಫಿಸಿಯೋಥೆರಪಿಸ್ಟ್‌ಗಳಿದ್ದಾರೆ. ಭಾರತದಲ್ಲಿ ಈ ಸಂಖ್ಯೆ 0.05 ಮಾತ್ರ. ಪ್ರತಿ ವರ್ಷ ಕರ್ನಾಟಕದಲ್ಲಿ 10,000 ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರಬರುತ್ತಿದ್ದಾರೆ. ಫಿಸಿಯೋಥೆರಪಿಸ್ಟ್‌ಗಳಲ್ಲಿ ಜ್ಞಾನದ ಜತೆಗೆ ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿದು ಕೌಶಲ್ಯವನ್ನು ಮೇಲ್ದರ್ಜೆಗೇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಬೆಂಗಳೂರಿನ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸ್‌ನ ಡಾ.ಎಂ.ಕೆ.ರಮೇಶ್ ದಿಕ್ಸೂಚಿ ಭಾಷಣ ನೀಡಿ, ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ 4000ಕ್ಕೂ ಅಧಿಕ ಪ್ರತಿನಿಧಿಗಳು ತಮ್ಮ ಜ್ಞಾನ ಹಾಗೂ ಕಲಿಕೆಯನ್ನು ಮೇಲ್ದರ್ಜೆಗೇರಿಸುವಲ್ಲಿ ಈ ಕಾರ್ಯಕ್ರಮ ಪೂರಕವಾಗಲಿದೆ ಎಂದರು.

ಯುವ ಸಾಧಕ ಪ್ರಶಸ್ತಿ ಪುರಸ್ಕೃತ ದುಬೈ ಮತ್ತು ನಾರ್ತನ್ ಎಮಿರೇಟ್ಸ್‌ನ ವಿಪಿಎಸ್ ಹೆಲ್ತ್ ಕೇರ್‌ನ ಸಿಇಒ ಡಾ. ಶಾಜಿರ್ ಗಫರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಫಿಸಿಯೋ ಹಾಗೂ ಇಂಟರ್‌ನ್ಯಾಶನಲ್ ಅಫೇರ್ಸ್ ಆಫ್ ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋಥೆರಪಿಸ್ಟ್ ಅಧ್ಯಕ್ಷ ಡಾ.ಅಲಿ ಇರಾನಿ ಹಾಗೂ ಭಾರತೀಯ ಫಿಸಿಯೋಥೆರಪಿಸ್ಟ್‌ಗಳ ಸಂಘದ ಅಧ್ಯಕ್ಷ ಡಾ.ಸಂಜೀವ್ ಕೆ. ಝಾ ಉಪಸ್ಥಿತರಿದ್ದರು.

 ಸಮ್ಮೇಳನ ಸಂಘಟನಾ ಸಮಿತಿಯ ಮುಖ್ಯಸ್ಥ ಡಾ.ಯು.ಟಿ.ಇಫ್ತಿಕಾರ್ ಅಲಿ ಸಹಕರಿಸಿದರು. ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ಸುಹೈಲ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News