ಬೆಂಗಳೂರು: ವ್ಯಾಪಾರಕ್ಕೆ ಅಡ್ಡಿ; ಕೋಮುವಾದಿ ವಿಭಜನೆಯನ್ನು ತಿರಸ್ಕರಿಸುವಂತೆ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಕರೆ
ಬೆಂಗಳೂರು, ಮಾ.25: ಬೀದಿ ವ್ಯಾಪಾರಿಗಳ ನೆಪವೊಡ್ಡಿ ಕೋಮುವಾದಿ ವಿಷಬೀಜವನ್ನು ಬಿತ್ತಲು ಹೊರಟಿರುವ ಮತ್ತು ಸಮಾಜದ ವಿಭಜನೆಯನ್ನು ಮಾಡುವ ಎಲ್ಲಾ ಪ್ರಯತ್ನಗಳ ವಿರುದ್ಧ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘಟನೆ ಮತ್ತು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟವು ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ. ಸಂಘ ಪರಿವಾರದ ದ್ವೇಷ ಹರಡುವ ಮತ್ತು ಕೋಮುವಾದ ಹಬ್ಬುವ ಎಲ್ಲಾ ಪ್ರಯತ್ನಗಳನ್ನು ತಿರಸ್ಕರಿಸುತ್ತೇವೆ ಎಂದು ಒಕ್ಕೂಟವು ಪ್ರಕಟನೆ ಹೊರಡಿಸಿದೆ.
ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯ ಅಡಿಯಲ್ಲಿರುವ ದೇವಸ್ಥಾನಗಳು ಆಯೋಜಿಸುವ ಜಾತ್ರೆ, ವಾರ್ಷಿಕೋತ್ಸವ ಮತ್ತು ಧಾರ್ಮಿಕ ಹಬ್ಬಗಳ ಸಮಯದಲ್ಲಿ ಹಿಂದುಯೇತರ ಸಮುದಾಯದ ವ್ಯಾಪಾರಿಗಳು ಅಂಗಡಿಗಳನ್ನು ಇಡದಂತೆ ಕಡಿವಾಣ ಹಾಕಬೇಕು ಎಂದು ವಿಶ್ವ ಹಿಂದೂ ಪರಿಷತ್ ಸಂಘದವರು ಹಲವಾರು ದೇವಸ್ಥಾನ ಆಡಳಿತ ಸಮಿತಿಗಳ ಮೇಲೆ ಒತ್ತಡವನ್ನು ಹೇರುತ್ತಿರುವುದು ಖಂಡನಾರ್ಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ರಾಜ್ಯ ಸರಕಾರದ ಮಂತ್ರಿಗಳು ವ್ಯಾಪಾರ ನಿರ್ಬಂಧದ ಕುರಿತು ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂಘ ಪರಿವಾರದ ಈ ಕೋಮುವಾದಿ ಬೇಡಿಕೆಗೆ ರಾಜ್ಯ ಸರಕಾರದ ಸಹಭಾಗಿತ್ವ ಇರುವುದು ಎದ್ದು ಕಾಣುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ-2014ರನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ಮತ್ತು ಬೀದಿ ವ್ಯಾಪಾರಿಗಳ ಜೀವನೋಪಾಯವನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ತಿಳಿಸಿದೆ.
ರಾಜ್ಯದಾದ್ಯಂತ ಬೀದಿ ವ್ಯಾಪಾರಿಗಳು ಸರಕಾರಿ ಅಧಿಕಾರಿಗಳಿಂದ ಮತ್ತು ಪೊಲೀಸರಿಂದ ದೈನಂದಿನ ಕಿರುಕುಳ, ಸುಲಿಗೆ, ಮತ್ತು ಹಿಂಸೆಯನ್ನು ಅನುಭವಿಸುತ್ತಾರೆ. ತಮ್ಮ ವ್ಯಾಪಾರದ ಸ್ಥಳದಿಂದ ಎತ್ತಂಗಡಿ ಆಗುವ ಬೆದರಿಕೆ ಮತ್ತು ತಮ್ಮ ಸರಕು-ಸಾಮಾನುಗಳಿಗೆ ಹಾನಿಯಾಗುವ ಭೀತಿಯಲ್ಲೇ ಜೀವನೋಪಾಯವನ್ನು ನಡೆಸುತ್ತಾರೆ. ಕೋವಿಡ್-19 ಸಾಂಕ್ರಾಮಿಕ ರೋಗವು ಬೀದಿ ವ್ಯಾಪಾರಿಗಳ ಜೀವನ ಮತ್ತು ಜೀವನೋಪಾಯವನ್ನು ಅಸ್ತವ್ಯಸ್ಥಗೊಳಿಸಿದ್ದು, ಅವರನ್ನು ತೀವ್ರತರ ಬಿಕ್ಕಟ್ಟಿನಲ್ಲಿ ಸಿಲುಕಿಸಿದೆ. ಈಗ ಈ ಬಲಪಂಥೀಯ ಸಂಘಟನೆಗಳು ಬೀದಿ ವ್ಯಾಪಾರಿಗಳನ್ನು ಮತ್ತು ಅವರ ಜೀವನೋಪಾಯವನ್ನು ಕೋಮುವಾದಿ ಧೋರಣೆಯ ಮೂಲಕ ಅತಂತ್ರಗೊಳಿಸುತ್ತಿದೆ ಎಂದು ಪ್ರಕಟನೆಯಲ್ಲಿ ಆರೋಪಿಸಲಾಗಿದೆ.
ಕೆಲವು ತಿಂಗಳ ಹಿಂದೆ ಮಾತ್ರ ಈ ವಿವಾದವು ಉಧ್ಭವವಾಗಿದ್ದು, ಈಗ ಅದು ಸಂಪೂರ್ಣ ದಾಳಿಯಾಗಿ ಪರಿವರ್ತನೆಗೊಂಡಿದೆ. ಮಾರ್ಚ್ 2021ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ತಾಲೂಕಿನಲ್ಲಿ ಅಬ್ದುಲ್ ಹ್ಯಾರಿಸ್ ಎಂಬ ಮುಸಲ್ಮಾನ ಐಸ್ ಕ್ರೀಮ್ ವ್ಯಾಪಾರಿ ಒಬ್ಬರನ್ನು ಕೋಮುವಾದಿ ಗೂಂಡಾಗಳು ಥಳಿಸಿದರು. ಬೇರೆ ಧರ್ಮಕ್ಕೆ ಸೇರಿದ್ದ ಈ ಬೀದಿ ವ್ಯಾಪಾರಿಯು ದೇವಸ್ಥಾನದ ಆವರಣವನ್ನು ಅಪವಿತ್ರಗೊಳಿಸಿದರು ಎಂಬ ಸುಳ್ಳು ನೆಪವನ್ನು ಒಡ್ಡಿದ್ದರು. ಅಬ್ದುಲ್ ಹ್ಯಾರಿಸ್ ಅವರು ಅಂದು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದರೋಡೆ ಮಾಡಿ, ಅವರ ಸಾಮಾನುಗಳನ್ನು ದ್ವಂಸ ಮಾಡಿದರು. ಹಾಗೆಯೇ, ಮುಸಲ್ಮಾನ ಸಮುದಾಯದ ಯಾವುದೇ ಬೀದಿ ವ್ಯಾಪಾರಿ ದೇವಸ್ಥಾನದ ಬಳಿ ಅಂಗಡಿಗಳನ್ನು ಹಾಕಬಾರದೆಂದು ಸಾಮೂಹಿಕ ಬೆದರಿಕೆಯನ್ನು ಒಡ್ಡಿದರು. ಮತ್ತೊಂದು ಘಟನೆಯಲ್ಲಿ, ಬೆಂಗಳೂರಿನ ವಿಜಯನಗರ ಮಾರುಕಟ್ಟೆಯಲ್ಲಿ ಕೋಮುವಾದಿ ಗೂಂಡಾಗಳು ಹಿಂದೂ ಮತ್ತು ಮುಸಲ್ಮಾನ ಬೀದಿ ವ್ಯಾಪಾರಿಗಳ ಅಂಗಡಿಗಳಿಗೆ ಭಾಗ್ವಾ ಕಟ್ಟಿ ಅಲ್ಲಿಯ ವ್ಯಾಪಾರಿಗಳ ಮಧ್ಯೆ ಕೋಮುವಾದಿ ಪ್ರೇರಿತ ಗಲಾಟೆಯನ್ನು ಎಬ್ಬಿಸಲು ಪ್ರಯತ್ನ ಪಟ್ಟರು. ವಿಜಯನಗರ ಮಾರುಕಟ್ಟೆಯ ಬೀದಿ ವ್ಯಾಪಾರಿಗಳು ಇದನ್ನು ತೀವ್ರವಾಗಿ ಪ್ರತಿರೋಧಿಸಿ, ಪೊಲೀಸರಲ್ಲಿ ದೂರು ನೀಡಿದರು. ಹಾಗೆಯೇ ಕಟ್ಟಿದ್ದ ಭಾಗ್ವಾಗಳನ್ನು ತೆಗೆದು ಹಾಕಿದರು ಎಂದು ಪ್ರಕಟನೆಯಲ್ಲಿ ಒಕ್ಕೂಟವು ನೆನಪಿಸಿಕೊಂಡಿದೆ.