ಪಾಕ್ ಜೈಲುಗಳಲ್ಲಿ 580 ಭಾರತೀಯ ಮೀನುಗಾರರು ಬಂಧಿ: ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪ
ಹೊಸದಿಲ್ಲಿ: ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಭಾರತೀಯ ಮೀನುಗಾರರ ವಿಷಯವನ್ನು ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹ ಗೋಹಿಲ್ ಅವರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹ ಗೋಹಿಲ್ ಅವರು, ಗುಜರಾತ್ ಕರಾವಳಿಯಾಚೆ ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿದ್ದಕ್ಕಾಗಿ 580 ಭಾರತೀಯ ಮೀನುಗಾರರನ್ನು ಅಲ್ಲಿಯ ಜೈಲುಗಳಿಗೆ ತಳ್ಳಲಾಗಿದೆ ಎಂದು ತಿಳಿಸಿದ್ದಾರೆ.
2018, ಡಿ.9ರಂದು ಪಾಕಿಸ್ತಾನದ ಕರಾವಳಿ ಭದ್ರತಾ ಸಿಬ್ಬಂದಿಗಳಿಂದ ಬಂಧಿಸಲ್ಪಟ್ಟಿದ್ದ 44ರ ಹರೆಯದ ಮೀನುಗಾರನ ವಿಷಯವನ್ನು ಪ್ರಸ್ತಾಪಿಸಿದ ಬಿಜೆಡಿಯ ಪ್ರಶಾಂತ ನಂದಾ, ʼಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿದ್ದಕ್ಕೆ ಮೂರು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಲಾಗುತ್ತದೆ. ಶಿಕ್ಷೆಯನ್ನು ಪೂರ್ಣಗೊಳಿಸಿದ್ದರೂ ಈ ಮೀನುಗಾರನನ್ನು ಬಿಡುಗಡೆ ಮಾಡಿರಲಿಲ್ಲ ಮತ್ತು ಆತ ಈ ವರ್ಷದ ಫೆ.3ರಂದು ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಒಂದೂವರೆ ತಿಂಗಳು ಕಳೆದಿದ್ದರೂ ಪಾಕ್ ಅಧಿಕಾರಿಗಳು ಆತನ ಶವವನ್ನು ಹಸ್ತಾಂತರಿಸಿಲ್ಲʼ ಎಂದು ತಿಳಿಸಿದ್ದಾರೆ.
ಭಾರತೀಯ ಮೀನುಗಾರರ ಬಿಡುಗಡೆ ಮತ್ತು ಮೃತ ಮೀನುಗಾರನ ಶವದ ಹಸ್ತಾಂತರಕ್ಕಾಗಿ ಸರಕಾರವು ರಾಜತಾಂತ್ರಿಕ ಮತ್ತು ಇತರ ಮಾರ್ಗಗಳನ್ನು ಬಳಸಬೇಕು ಎಂದು ಅವರು ಆಗ್ರಹಿಸಿದ್ದಾರೆ.