ಬೆಂಗಳೂರಿನ ವಶಿಷ್ಠ ಬ್ಯಾಂಕ್ ಹಗರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Update: 2022-03-26 13:52 GMT

ಬೆಂಗಳೂರು, ಮಾ.26: ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ವಶಿಷ್ಠ ಕ್ರೆಡಿಟ್ ಸೌಹಾರ್ದ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಕಾರಿ ಕೆ.ಎನ್.ವೆಂಕಟನಾರಾಯಣ ಹಾಗೂ ಅವರ ಪುತ್ರ ಕೃಷ್ಣ ಪ್ರಸಾದ್ ನಗರದ 1ನೆ ಸಿಸಿಎಚ್ ಕೋರ್ಟ್‍ಗೆ ಶರಣಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಸ್ವಯಂ ಪ್ರೇರಣೆಯಿಂದ ನ್ಯಾಯಾಲಯಕ್ಕೆ ಶರಣಾದ ವೆಂಕಟನಾರಾಯಣ ಹಾಗೂ ಅವರ ಪುತ್ರ ಕೃಷ್ಣ ಪ್ರಸಾದ್ ಅವರಿಬ್ಬರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

2021ರಲ್ಲಿ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ವಶಿಷ್ಠ ಕ್ರೆಡಿಟ್ ಸೌಹಾರ್ದ ಬ್ಯಾಂಕ್ ವಂಚನೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕಳೆದ ಒಂದು ವರ್ಷದಿಂದಲೂ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣವೇನು: ಹೆಚ್ಚಿನ ಬಡ್ಡಿ ಕೊಡುವ ಆಮಿಷವೊಡ್ಡಿ ಸಾವಿರಾರು ಗ್ರಾಹಕರಿಂದ ಠೇವಣಿ ಸಂಗ್ರಹಿಸಲಾಗಿತ್ತು. ಸರಿಯಾದ ದಾಖಲೆ, ಭದ್ರತೆ ಇಲ್ಲದೆ ಸಾಲ ಕೊಡಲಾಗಿತ್ತು. ಬ್ಯಾಂಕ್ ಸಿಇಒ ಸಂಬಂಧಗಳಿಗೆ ದೊಡ್ಡ ಮೊತ್ತದ ಸಾಲ ಕೊಟ್ಟ ಆರೋಪ ಕೇಳಿ ಬಂದಿತ್ತು. ಸಾಲ ವಸೂಲಾತಿಯಾಗದೆ ಬ್ಯಾಂಕ್ ನಷ್ಟಕ್ಕೆ ಸಿಲುಕಿತ್ತು. ಗ್ರಾಹಕರು ಬಡ್ಡಿ ಸಮೇತ ಠೇವಣಿ ವಾಪಸ್ ಮಾಡುವಂತೆ ಕೇಳಿದಾಗ ಕೊಡಲು ಹಣವಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಕೊರೋನ ತುರ್ತು ಸ್ಥಿತಿ ಇರುವುದರಿಂದ ಸಾಲಗಾರರು ಸಾಲ ವಾಪಸ್ ನೀಡುತ್ತಿಲ್ಲ. ಹೀಗಾಗಿ, ಸಮಯಾವಕಾಶ ನೀಡಬೇಕು ಎಂದು ವೆಂಕಟನಾರಾಯಣ ತಿಳಿಸಿದ್ದರು. ಗ್ರಾಹಕರು ಕೆಲ ದಿನ ಕಾದು ವಂಚನೆ ಪ್ರಕರಣ ದಾಖಲಿಸಿದ್ದರು.

56 ಮಂದಿ ವಿರುದ್ಧ ಎಫ್‍ಐಆರ್: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ನಿಯಮಿತದ ಡೆಪ್ಯುಟಿ ಜನರಲ್ ಮ್ಯಾನೇಜರ್ ನಾರಾಯಣ್ ಹೆಗ್ಡೆ ಹನುಮಂತನಗರ ಪೊಲೀಸ್ ಠಾಣೆಗೆ ಕೊಟ್ಟ ದೂರಿನ ಆಧಾರದ ಮೇಲೆ ಕೆ.ಎನ್.ವೆಂಕಟನಾರಾಯಣ್ ಸೇರಿ ಬ್ಯಾಂಕ್ ಆಡಳಿತ ಮಂಡಳಿಗೆ ಸಂಬಂಸಿದ 56 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News