ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ

Update: 2022-03-26 14:46 GMT

ಬೆಂಗಳೂರು, ಮಾ.26: ಸರಕಾರವು ಸಮಾಜ ಕಲ್ಯಾಣ ಇಲಾಖೆಯಲ್ಲಿ ಬರುವ ನಾಲ್ಕು ನಿಗಮಗಳ ಗಂಗಾ ಕಲ್ಯಾಣ ಯೋಜನೆಯ ಟೆಂಡರ್ ಪಡೆಯಲು ಸಣ್ಣ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 6 ಗುತ್ತಿಗೆದಾರರಿಗೆ ಮಾತ್ರ ಅನುಕೂಲ ಮಾಡಿಕೊಟ್ಟು, ನಿಗಮಗಳಲ್ಲಿ ಟೆಂಡರ್ ಪಡೆಯುತ್ತಿದ್ದ ಉಳಿದ 70 ಗುತ್ತಿಗೆದಾರರನ್ನು ಅತಂತ್ರಗೊಳಿಸಲಾಗಿದೆ ಎಂದು ಕರ್ನಾಟಕ ಸ್ಟೇಟ್ ಸೋಷಿಯಲ್ ವೆಲ್‍ಫೇರ್ ಬೋರ್‍ವೆಲ್ ಅಂಡ್ ಪಂಪ್‍ಸೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್‍ನ ಮುಂಖಂಡ ರಾಮಕೃಷ್ಣ ರೆಡ್ಡಿ ಆರೋಪಿಸಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಯುವ ಟೆಂಡರ್, ಪಂಪು ತಯಾರಿಕಾ ಹಾಗೂ ಸರಬರಾಜು ಟೆಂಡರ್‍ಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತಿತ್ತು. ಇದರಿಂದ ಯಾವುದೇ ಅವ್ಯವಹಾರವಾಗದೆ, ಟೆಂಡರ್ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಶ್ರೀರಾಮುಲು ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾಗ ಹೊಸ ನೀತಿಯನ್ನು ಜಾರಿಗೆ ತಂದು, ಎಲ್ಲಾ ಟೆಂಡರ್‍ಗಳನ್ನು ವೀಲಿನಗೊಳಿಸಲಾಯಿತು. ಇದರಿಂದ 70 ಗುತ್ತಿಗೆದಾರರು ಅತಂತ್ರರಾಗಿದ್ದಾರೆ. ಅಲ್ಲದೆ, ಯಾವುದೇ ಅನುಭವವಿಲ್ಲದ 6 ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಟೆಂಡರ್ ಪಡೆದಿದ್ದಾರೆ ಎಂದು ಅವರು ದೂರಿದರು.

ನಿಗಮಗಳ ಅಧಿಕಾರಿಗಳು ಮೊದಲ ಬಾರಿಗೆ ಶ್ರೀ ಬಾಲಾಜಿ ಬೋರ್‍ವೆಲ್ಸ್, ಲಕ್ಷ್ಮಿ ವೆಂಕಟೇಶ್ವರ ಬೋರ್‍ವೆಲ್ಸ್, ಶಕ್ತಿ ಬೋರ್‍ವೆಲ್ಸ್‍ಗೆ ಟೆಂಡರ್ ನೀಡಲು ನಿರಾಕರಿಸಿದ್ದರು. ಆದರೆ ಎರಡನೆ ಬಾರಿಗೆ ಈ ಗುತ್ತಿಗೆದಾರರು ಟೆಂಡರ್ ಅನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಸಂಪೂರ್ಣ ಅವ್ಯವಹಾರ ನಡೆದಿದ್ದು, ಸರಕಾರವು ಸ್ವತಂತ್ರ ತನಿಖೆಗೆ ಆದೇಶಿಸಿ ವರದಿಯನ್ನು ಪಡೆದು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News