ಬೆಂಗಳೂರು: ಪೆಟ್ರೋಲ್- ಡೀಸೆಲ್, ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

Update: 2022-03-26 14:48 GMT

ಬೆಂಗಳೂರು, ಮಾ. 26: ‘ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಅನಿಯಮಿತ ಏರಿಕೆಯನ್ನು ಖಂಡಿಸಿ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‍ಯುಸಿಐ) ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಸಮಿತಿ ಸದಸ್ಯ ಎಚ್.ಪಿ.ಶಿವಪ್ರಕಾಶ್ ಮಾತನಾಡಿ, ‘ಕೇಂದ್ರದ ಬಿಜೆಪಿ ಸರಕಾರಕ್ಕೆ ಜನಸಾಮಾನ್ಯರ ಕಷ್ಟ, ನೋವುಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ತೋರಿಸುತ್ತಲೇ ಬಂದಿದೆ. ಒಂದು ಕಡೆ ಕೋಮುಗಲಭೆಗಳನ್ನು ಹೊತ್ತಿಸಿ ಜನರ ದಿಕ್ಕು ತಪ್ಪಿಸುವ ಕುತಂತ್ರವನ್ನೆಸುಗುತ್ತಿದೆ, ಇನ್ನೊಂದು ಕಡೆ ದೇಶದ ನವರತ್ನಗಳಂತೆ ಇದ್ದ ರಾಷ್ಟೀಕೃತ ಕಾರ್ಖಾನೆಗಳು, ಉದ್ಯಮಗಳನ್ನು ಖಾಸಗಿ ಒಡೆತನದ ಪಾಲುಮಾಡಿ, ಅಗತ್ಯ ವಸ್ತುಗಳ ದರಗಳನ್ನು ಮನಸೋ ಇಚ್ಛೆ ಏರಿಸುತ್ತಿದೆ. ಬಿಜೆಪಿ ಸರಕಾರÀ ಜನವಿರೋಧಿ ಎಂಬುದು ಸ್ಪಷ್ಟ' ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಸಮಿತಿ ಸದಸ್ಯೆ ಎಸ್.ಶೋಭಾ ಮಾತನಾಡಿ, ‘ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ಮತ್ತೆ ತೈಲೋತ್ಪನ್ನಗಳ ಬೆಲೆಯನ್ನು ಏರಿಸಲಾಗಿದೆ. ರಶ್ಯಾ-ಉಕ್ರೇನ್ ಯುದ್ಧದ ನೆಪ ನೀಡಿ ಈ ಬೆಲೆ ಏರಿಕೆಯನ್ನು ಮಾಡಲಾಗಿದೆ. ಆದರೆ ವಾಸ್ತವವೆ ಬೇರೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‍ಗೆ 135 ಡಾಲರ್‍ನಿಂದ 100 ಡಾಲರ್‍ಗೆ ಇಳಿದಿದ್ದರೂ ಕೇಂದ್ರ ಸರಕಾರವು ಅಡುಗೆ ಅನಿಲದ ದರ 50ರೂ.ಗಳಷ್ಟು ಹೆಚ್ಚಳ ಮಾಡಿದೆ.

ಪ್ರತಿ ಸಿಲಿಂಡರ್ ಬೆಲೆ 1ಸಾವಿರ ರೂ.ಸನಿಹಕ್ಕೆ ತಲುಪಿದೆ. ಡೀಸೆಲ್ ಸಗಟು ದರವನ್ನು ಲೀಟರ್‍ಗೆ 25 ರೂ. ಏರಿಕೆ ಮಾಡಿರುವುದರಿಂದ ಸಾರಿಗೆ, ಸಾಗಾಟದ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಕೇಂದ್ರ ಬಿಜೆಪಿ ಸರಕಾರದ ವಂಚನೆ ಜನರಿಗೆ ಅರ್ಥವಾಗುತ್ತಿದೆ. ದೇಶದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯು ಗರಿಷ್ಠ ಪ್ರಮಾಣದಲ್ಲಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ. 

ಕೊರೋನ ಮಹಾಮಾರಿಯ ಕಾಲದಲ್ಲೂ ಬಿಲಿಯಾಂತರ ಲಾಭ ಮಾಡಿಕೊಂಡ ಶ್ರೀಮಂತರಿಗೆ ಯಾವ ತೆರಿಗೆಯನ್ನೂ ವಿಧಿಸದ ಕೇಂದ್ರ ಬಡವರ ಮೇಲೆ ತೆರಿಗೆಯ ಬರೆ ಎಳೆಯುತ್ತಿದೆ. ಈ ಬೆಲೆ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು. ಹಾಗೆಯೇ ಇಂತಹ ಜನದ್ರೋಹಿ ಸರಕಾರಗಳನ್ನು ಜನ ತಿರಸ್ಕರಿಸಬೇಕು ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News