×
Ad

ಪಂಚಮಸಾಲಿ 2ಎ ಮೀಸಲಾತಿ: ಸರಕಾರ ಎ.14ರೊಳಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ; ಜಯಮೃತ್ಯುಂಜಯ ಶ್ರೀ

Update: 2022-03-26 20:40 IST

ಬೆಂಗಳೂರು, ಮಾ.26: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವ ಸಂಬಂಧ ಎ.14ರೊಳಗೆ ಸರಕಾರ ಕ್ರಮ ಕೈಗೊಳ್ಳದಿದ್ದರೆ ಮತ್ತೊಂದು ಹೋರಾಟ ಕೈಗೊಳ್ಳುವುದಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಸರಕಾರ ಕೊಟ್ಟ ಮಾ.30ರ ಅವಧಿ ಮುಗಿಯುತ್ತ ಬಂದಿದೆ. ಅಧಿವೇಶನಕ್ಕೆ ಇನ್ನೆರಡು ದಿನ ಬಾಕಿ ಇದೆ. ಮೀಸಲಾತಿಗಾಗಿ 40 ದಿನಗಳ ಕಾಲ ಪಾದಯಾತ್ರೆಯ ಪ್ರತಿಭಟನೆ ನಡೆಸಿದರೂ ಸರಕಾರ ಸ್ಪಂದಿಸುವ ಕೆಲಸ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರು ತಿಂಗಳಿನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ನಂಬಿಕೆ ಇಟ್ಟಿದ್ದೆವು. ಮಾಜಿ ಸಿಎಂ ಯಡಿಯೂರಪ್ಪನವರ ರೀತಿ ಬೊಮ್ಮಾಯಿ ಅವರು ಮಾಡುವುದಿಲ್ಲ ಎಂದು ಭಾವಿಸಿದ್ದೆವು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

10 ವರ್ಷಗಳ ಕಾಲ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟಿದ್ದೆವು. ಆದರೂ ಯಡಿಯೂರಪ್ಪ ಯಾವುದೇ ಸಹಾಯ ಮಾಡಲಿಲ್ಲ. ಹೀಗಾಗಿ ಅವರ ಮೇಲೆ ಇಟ್ಟಿದ್ದ ನಂಬಿಕೆ ಕಳೆದುಕೊಂಡಿದ್ದೇವೆ. ಬಜೆಟ್ ಅಧಿವೇಶನದಲ್ಲಿ ನಮ್ಮ ಭರವಸೆ ಈಡೇರಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಆದರೂ ನಮ್ಮ ಭರವಸೆ ಈಡೇರಿಲ್ಲ. ಯಡಿಯೂರಪ್ಪ ಅವರು ಹಿಂದುಳಿದ ಆಯೋಗಕ್ಕೆ ವರದಿ ಕೊಡುವಂತೆ ಸೂಚಿಸುವುದಾಗಿ ಹೇಳಿದ್ದರು. ವರದಿ ಕೊಡಲು ಒಂದು ವರ್ಷ ಸಾಕಾಗಿತ್ತು. ಆದರೂ ಮಾಡಿಲ್ಲ. ಕೊರೋನ ಬಂತು, ಲಾಕ್‍ಡೌನ್ ಆಯಿತು ಅಂತೆಲ್ಲ ಕಾಲ ಕಳೆದರು ಎಂದು ಹೇಳಿದರು.

ಇದುವರೆಗೂ ಹಿಂದುಳಿದ ವರ್ಗಗಳ ಆಯೋಗ ಸರ್ವೇ ಮಾಡುವ ಕೆಲಸ ಮಾಡಿಯೇ ಇಲ್ಲ. ನಾವು ರೊಟ್ಟಿ ತಿಂದು ಮಲಗಿಬಿಡುತ್ತೇವೆ ಎಂದು ಭಾವಿಸಿದರೆ ಅದು ತಪ್ಪು ಎಂದು ಶ್ರೀಗಳು ಹೇಳಿದರು. ಬೊಮ್ಮಾಯಿ ಅವರು ಖಂಡಿತಾ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ ಎಂದು ಭಾವಿಸಿದ್ದೇವೆ. ನಮ್ಮ ಜತೆ ಬೇಡ, ನಮ್ಮ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಸಿ.ಪಾಟೀಲ್ ಜತೆ ಮಾತನಾಡಿ ಹೇಳುವಂತೆ ಒತ್ತಾಯಿಸಿದರು.

ನಾನು ನಿಮ್ಮ ಮನೆಗೆ ಬಂದು 24 ಗಂಟೆಗಳ ಕಾಲ ಕೂರುವ ಸ್ವಾಮೀಜಿ ಅಲ್ಲ, ನೀವು ಕರೆದಾಗ ಬರುವ ಸ್ವಾಮೀಜಿಯೂ ಅಲ್ಲ. ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ಮಾ.31ರಂದು ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವ ಬಗ್ಗೆ ಸ್ಪಷ್ಟನೆ ನೀಡಿ. ನಿಮ್ಮ ಮೇಲೆ ನಂಬಿಕೆ ಇಟ್ಟು ನಾವು ಹಲವಾರು ಬಾರಿ ಗಡುವು ನೀಡಿದ್ದೆವು. ಬೇರೆ ಶ್ರೀಗಳ ರೀತಿ ನಾನು ಅನುದಾನ ಕೊಡಿ ಎಂದು ನಿಮ್ಮಲ್ಲಿಗೆ ಬಂದಿಲ್ಲ. ಪಂಚಮಸಾಲಿ ಮೀಸಲಾತಿ ಕೊಡಿ ಎಂದು ಬೇಡುತ್ತಿದ್ದೇನೆ ಎಂದು ತಿಳಿಸಿದರು. ಚುನಾವಣಾ ವರ್ಷಕ್ಕೂ ನಮ್ಮ ಪಂಚಮಸಾಲಿ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News