ಬೆಂಗಳೂರು: ‘ಮಧುಮೇಹ' ಜಾಗೃತಿ ಅಭಿಯಾನಕ್ಕೆ ಆರೋಗ್ಯ ಇಲಾಖೆ ಆಯುಕ್ತರಿಂದ ಚಾಲನೆ
ಬೆಂಗಳೂರು, ಮಾ. 26: ಮಧುಮೇಹ ಕಾಯಿಲೆಯಿಂದ ಉಂಟಾಗುವ ಅಂಗಚ್ಛೇದನವನ್ನು ತಡೆಗಟ್ಟಲು ಜಾಗೃತಿ ಮತ್ತು ತಪಾಸಣೆ ಅಭಿಯಾನ ‘ಸೇಫ್ ಫೀಟ್-ಸೇಫ್ ರೈಡ್'ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತ ರಂದೀಪ್ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಬಲಿಸುತ್ತಿವೆ. ಜನಸಾಮಾನ್ಯರಲ್ಲಿ ಪಾದದ ಮಧುಮೇಹ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರಂಭದಲ್ಲೆ ರೋಗ ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ ವೈದ್ಯರಿಗೆ ಶಿಕ್ಷಣ ನೀಡುವ ಗುರಿಯನ್ನು ಅಭಿಯಾನ ಹೊಂದಿದೆ' ಎಂದು ತಿಳಿಸಿದರು.
ದೇಶದಲ್ಲಿ 2021ರಲ್ಲಿ ಅಂದಾಜು 74 ಮಿಲಿಯನ್ ಜನರು ಮಧುಮೇಹಿಗಳಾಗಿದ್ದು, ಮಧುಮೇಹದಿಂದ ಪ್ರತಿ 20 ಸೆಕೆಂಡಿಗೆ ಒಂದು ಅಂಗ ಊನವಾಗುತ್ತದೆ. ಪ್ರಪಂಚದಲ್ಲಿ ಸುಮಾರು 200 ಮಿಲಿಯನ್ ಜನರಿಗೆ ಅವರ ಜೀವಿತಾವಧಿಯಲ್ಲಿ ಮಧುಮೇಹದಿಂದ ಪಾದದ ಹುಣ್ಣುಗಳಾಗುತ್ತವೆ. ಸುಮಾರು 37 ಮಿಲಿಯನ್ ಜನರು ನರರೋಗವನ್ನು ಹೊಂದಿರುತ್ತಾರೆಂದು ಅಂದಾಜಿಸಲಾಗಿದೆ. ನರರೋಗವು ಸಾಮಾನ್ಯವಾಗಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ, ಸ್ನಾಯು ದೌರ್ಬಲ್ಯ ಮತ್ತು ನೋವಿಗೆ ಕಾರಣವಾಗುವ ಒಂದು ಅಥವಾ ಹೆಚ್ಚಿನ ನರಗಳ ಹಾನಿ ಅಥವಾ ಊನಗೊಳಿಸುತ್ತದೆ. ಇದು ಹೆಚ್ಚಾಗಿ ಮಧುಮೇಹ ರೋಗಿಗಳ ಕೈ ಮತ್ತು ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ.
24 ಮಿಲಿಯನ್ ಜನರು ಪಾದದ ಹುಣ್ಣನ್ನು ಹೊಂದುತ್ತಾರೆ. ಇವರಲ್ಲಿ 4 ಮಿಲಿಯನ್ ಜನರಿಗೆ ಅಂಗಚ್ಛೇದನಗಳಿಗೆ ಕಾರಣವಾಗುತ್ತದೆ, ಇವರಲ್ಲಿ ಶೇ.80ರಷ್ಟು ಜನರಿಗೆ ಮುನ್ನೆಚ್ಚರಿಕೆ ವಹಿಸುವುದರಿಂದ ತಡೆಯಬಹುದು. ಮಧುಮೇಹ ರೋಗಿಗಳಲ್ಲಿ ಪ್ರಮುಖ ಅಂಗಚ್ಛೇದನದ ನಂತರದ 5 ವರ್ಷದ ಮರಣ ಪ್ರಮಾಣವು ಶೇ.50ರಷ್ಟಾಗಿದೆ. ಇದು ಕ್ಯಾನ್ಸರ್‍ನಿಂದ ಉಂಟಾಗುವ ಮರಣದ ಪ್ರಮಾಣವನ್ನೂ ಮೀರಿದೆ ಎಂದು ತಿಳಿಸಲಾಗಿದೆ.
ಇದೇ ವೇಳೆ ಮಾತನಾಡಿದ ಡಾ.ಸಂಜಯ್ ಶರ್ಮಾ, ‘ನಮ್ಮ ದೇಶದಲ್ಲಿ ಮಧುಮೇಹದ ವಿಧಾನವು ವೈವಿಧ್ಯಮಯ. ಪರಿಣತಿ ಹೊಂದಿರುವ ವೈದ್ಯರು, ಔಷಧದ ಶಾಖೆಯ ಮೇಲೆ ಅವಲಂಬಿತವಾಗಿದೆ. ಕಾಲುಗಳ ಅಸ್ವಸ್ಥತೆಗಳ ರೋಗ ಪತ್ತೆ ಮತ್ತು ಚಿಕಿತ್ಸೆಯೊಂದಿಗೆ ಪ್ರತ್ಯೇಕವಾಗಿ ಪರಿಗಣಿಸುವ ಕುರಿತು ವಿಶೇಷವಾದ ಪೊಡಿಯಾಟ್ರಿಯನ್ನು ವೈದ್ಯಕೀಯ ಕಾಲೇಜುಗಳಲ್ಲಿ ಕಲಿಸಲಾಗುತ್ತಿಲ್ಲ. ಇದನ್ನು ಪ್ರತ್ಯೇಕ ವಿಭಾಗವಾಗಿ ಗುರುತಿಸಿಲ್ಲ ಮತ್ತು ಸರ್ವಸಮ್ಮತವಾಗಿ ಒಪ್ಪಿಕೊಳ್ಳುವುದಿಲ್ಲ. ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿರುವ ವೈದ್ಯರೇ ಪಾದದ ಮಧುಮೇಹ ರೋಗವನ್ನು ತಡೆಗಟ್ಟಬಹುದು' ಎಂದು ಹೇಳಿದರು.