ಪುತ್ತೂರು: ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ ನಿಧನ
ಪುತ್ತೂರು: ತಾಲೂಕಿನ ಒಳಮೊಗರು ಗ್ರಾಮದ ಚಿಲ್ಮೆತ್ತಾರು ನಿವಾಸಿ ನಿವೃತ್ತ ತಹಶೀಲ್ದಾರ್ ಸಿ.ಎಚ್. ಕೋಚಣ್ಣ ರೈ(85) ವಯೋಸಹಜ ಅನಾರೋಗ್ಯದಿಂದ ರವಿವಾರ ಬೆಳಗ್ಗೆ ಮಂಗಳೂರಿನ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.
ಗಾಂಧಿ ವಾದಿ ಎಂದೇ ಹೆಸರಾಗಿದ್ದ ಕೋಚಣ್ಣ ರೈ ಅವರು ಪುತ್ತೂರು, ಬೆಳ್ತಂಗಡಿ ಸೇರಿದಂತೆ ವಿವಿಧ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ಸಲ್ಲಿಸಿದ್ದರು. ಪುತ್ತೂರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದರು. ಕೋಚಣ್ಣ ರೈ ಅವರನ್ನು ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿತ್ತು.
ತಮ್ಮ ಅಧಿಕಾರವಧಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅರ್ಹವಾದ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಕೋಚಣ್ಣ ರೈ, ಬೆಳ್ತಂಗಡಿಯಲ್ಲಿ ಸಾವಿರಾರು ಬಡ ಮತ್ತು ದಲಿತ ಕುಟುಂಬಕ್ಕೆ ಅತ್ಯಂತ ಸುಲಭವಾಗಿ ಹಾಗೂ ಸುಲಲಿತವಾಗಿ ನಿವೇಶನದ ಹಕ್ಕು ಪತ್ರವನ್ನು ಒದಗಿಸಿದ್ದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 14 ಎಕ್ರೆ ಜಾಗ, ಅಲ್ಲದೆ ಹಲವು ಮಸೀದಿ, ಚರ್ಚ್, ಮಂದಿರಗಳಿಗೆ ತನ್ನ ವಿಶೇಷಾಧಿಕಾರದಿಂದ ಜಾಗ ಮಂಜೂರುಗೊಳಿಸಿದ್ದರು. ಮೊಟ್ಟೆತ್ತಡ್ಕದಲ್ಲಿ ಗೇರು ಸಂಶೋಧನ ಕೇಂದ್ರಕ್ಕೆ 36 ಎಕ್ರೆ ಜಾಗ, ಪುತ್ತೂರಿಗೆ ಬೈಪಾಸ್ ರಸ್ತೆಯ ಸೌಲಭ್ಯ, ಬಿರುಮಲೆ ಬೆಟ್ಟದ ಅಭಿವೃದ್ಧಿಯ ಹರಿಕಾರನಾಗಿ ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ದಿಕ್ಕು ಕಲ್ಪಿಸಿದ್ದರು. ಪುತ್ತೂರಿನ ಬೀರಮಲೆ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದ್ದರು.
ಬಿರುಮಲೆ ಗುಡ್ಡ ಪುತ್ತೂರಿನ ಬೈಪಾಸ್ ರಸ್ತೆ ಹಾಗೂ ಮೊಟ್ಟೆತ್ತಡ್ಕದಲ್ಲಿ ಗೇರು ಸಂಶೋಧನ ಕೇಂದ್ರ ಕೋಚಣ್ಣ ರೈ ಯವರ ದೂರದೃಷ್ಟಿಯ ಯೋಜನೆಗಳಾಗಿದೆ. ಸಮಾಜದ ಎಲ್ಲಾ ವರ್ಗದ ಪ್ರೀತಿ ಮತ್ತು ವಿಶ್ವಾಸಗಳಿಸಿದ್ದದ್ದರು.
ಮೃತರು ಮಂಗಳೂರಿನಲ್ಲಿ ದಂತ ವೈದ್ಯರಾಗಿರುವ ಪುತ್ರ ಡಾ. ಮಂಜುನಾಥ್ ಸಹಿತ ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.