ಆಡು-ಕುರಿ ವಧಾಗೃಹಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಮನಪಾ ಕ್ರಮ ವಹಿಸಲು ಯು.ಟಿ.ಖಾದರ್ ಒತ್ತಾಯ
ಮಂಗಳೂರು: ಮನಪಾ ಅಧೀನದ ಕುದ್ರೋಳಿ ಕುರಿ ಆಡು ವಧಾಗೃಹದ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾನುಸಾರ ನೈರ್ಮಲ್ಯ ಪಾಲನೆಗೆ ಮತ್ತು ಮೂಲಭೂತ ಸೌಕರ್ಯ ಒದಗಿಸಲು ಸೂಕ್ತ ಕ್ರಮ ವನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯವಸ್ಥೆ ಮಾಡಬೇಕು ಅಥವಾ ಪರ್ಯಾಯ ಸ್ಥಳವನ್ನು ಗುರುತಿಸಿ ಸೂಕ್ತ ವಧಾಗೃಹದ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಹಾಗೂ ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜನ ಸಾಮಾನ್ಯರ ಆರೋಗ್ಯ ದ ದೃಷ್ಟಿಯಿಂದ ಹಾಲಿ ಇರುವ ಅಡು, ಕುರಿ ವಧಾಗೃಹದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿ ರುವ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಆರೋಗ್ಯ ತಪಾಸಣೆ ನಡೆಸದೆ ಆಡು, ಕುರಿಗಳ ಮಾಂಸ ಮಾರಾಟ ಮಾಡಲು ಮಾರಾಟಗಾರರು ಆರಂಭಿಸಿದರೆ ಗ್ರಾಹಕರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಬಹುದು ಈ ಹಿನ್ನೆಲೆಯಲ್ಲಿ ಇರುವ ವಧಾಗೃಹದ ಶುಚಿತ್ವ ಮತ್ತು ನೈರ್ಮಲ್ಯದ ಕ್ರಮಗಳು ಅಥವಾ ಪ್ರತ್ಯೇಕ ವಧಾಗೃಹದ ನಿರ್ಮಾಣ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಆಯಾ ಶಾಲಾ ಸಮವಸ್ತ್ರ ದೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಾನಸಿಕ ಒತ್ತಡ ವಿಲ್ಲದ ವಾತವರಣದಲ್ಲಿ ಪರೀಕ್ಷೆಗೆ ಹಾಜರಾಗಲು ಖಾಸಗಿ ಮತ್ತು ಸರಕಾರಿ ಆಡಳಿತ ಮಂಡಳಿ, ಪೋಷಕರು ಸಹಕಾರ ನೀಡಬೇಕು. ಧರ್ಮ ಗುರುಗಳು ಈ ಬಗ್ಗೆ ನೀಡಿರುವ ಕರೆಯನ್ನು ಸ್ವಾಗತಿಸುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆಯನ್ನು ತಿರುಚಿ ಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ಬಿಜೆಪಿ ತೊಡಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಯಿಂದ ಜನ ಸಂಕಷ್ಟ ಅನುಭವಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಈ ತಂತ್ರ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸ್ವಾಮಿಗಳ ಬಳಿ ಗೌರವದಿಂದ ನಡೆದುಕೊಂಡು ಅವರ ಮನವಿಗಳಿಗೆ ಅಧಿಕಾರದಲ್ಲಿದ್ದಾಗ ಸಕಾರಾತ್ಮಕ ವಾಗಿ ಸ್ಪಂದಿಸಿ ದವರು. ಆ ಕಾರಣದಿಂದ ಅವರ ಕಾಲದಲ್ಲಿ ಯಾವ ಸ್ವಾಮಿ ಗಳು ಪ್ರತಿಭಟನೆಗೆ ಇಳಿದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸ್ವಾಮಿಗಳು ಅತೃಪ್ತಿ ವ್ಯಕ್ತ ಪಡಿಸಿದ ಹಲವು ಸಂದರ್ಭಗಳಿವೆ. ಆದರೆ ಈಗ ಬಿಜೆಪಿಯವರು ಸಿದ್ದರಾಮಯ್ಯ ರ ಮಾತುಗಳನ್ನು ತಿರುಚಿ ಸ್ವಾಮಿಗಳನ್ನು ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ, ಸುದರ್ಶನ್ ಶೆಟ್ಟಿ, ಸಿದ್ದಿಕ್ ಪಾರೆ, ಸಿದ್ದಿಕ್ ಉಚ್ಚಿಲ್ ಉಪಸ್ಥಿತ ರಿದ್ದರು.