ದಲಿತ ಕಾಲನಿಗಳಿಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಪ್ರಸ್ತಾವನೆ: ಡಿಸಿಪಿ ಹರಿರಾಂ ಶಂಕರ್
ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ದಲಿತರ ೫೦ ಕಾಲನಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಮಂಗಳೂರು ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) ಹರಿರಾಂ ಶಂಕರ್ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿ ಸಭಾಂಗಂದಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಸಮುದಾಯದವರ ಅಹವಾಲಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಲಿತ ನಾಯಕ ಎಸ್‌ಪಿ ಆನಂದ್ ಮಾತನಾಡಿ ದಲಿತರ ಕಾಲನಿಯಲ್ಲಿ ಡ್ರಗ್ಸ್ ಸೇವನೆ ಮತ್ತಿತರ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಸ್ಥಳೀಯರಿಗಿಂತ ಹೊರಗಿನವರ ಸಂಖ್ಯೆ ಅಧಿಕವಾಗಿದೆ. ಇದನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮರಾಗಳ ಅಗತ್ಯವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹರಿರಾಂ ಶಂಕರ್ ‘ಈಗಾಗಲೇ 50 ಕಾಲನಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲು ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತುರ್ತಾಗಿ ಯಾವ ಕಾಲನಿಗಳಿಗೆ ಅಳವಡಿಸಬೇಕು ಎಂಬುದನ್ನು ಕೂಡ ಸೂಚಿಸಲಾಗಿದೆ’ ಎಂದು ಹೇಳಿದರು.
ದಲಿತ ಸಮುದಾಯಕ್ಕೆ ಸಂಬಂಧಿಸಿದ ಕೆಲವು ಜಾತಿ ಸೂಚಕ ಪದಗಳನ್ನು ಬಳಕೆ ಮಾಡುವ ಬಗ್ಗೆ ದಲಿತ ಮುಂದಾಳುಗಳಲ್ಲೇ ಸಭೆಯಲ್ಲಿ ವಾಗ್ವಾದ ನಡೆಯಿತು. ಈ ಸಂದರ್ಭ ಮಧ್ಯಪ್ರವೇಶಿಸಿ ಡಿಸಿಪಿ ಈ ವಿಚಾರವಾಗಿ ಪರಸ್ಪರ ವಾಗ್ವಾದ ಮಾಡದೆ ಒಗ್ಗಟ್ಟಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಅಹವಾಲುಗಳಲ್ಲದೆ ಇತರ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸುತ್ತಿದ್ದೇವೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ನಗರದ ಕೆಲವು ಖಾಸಗಿ ಆಸ್ಪತ್ರೆಗಳು ಬಡವರಿಗೆ ಚಿಕಿತ್ಸೆ ನೀಡುವ ಸಂದರ್ಭ ನಿರ್ಲಕ್ಷ್ಯ ತೋರಿಸುತ್ತಿವೆ. ಬಡ ಜನರಿಗಾಗಿ ಇರುವ ಆಯುಷ್ಮಾನ್ ಸೇರಿದಂತೆ ಸರಕಾರದ ವಿವಿಧ ಯೋಜನೆಗಳಡಿ ಅತ್ಯಧಿಕ ಬಿಲ್ ವಸೂಲಿ ಮಾಡುತ್ತಿವೆ ಎಂದು ದುರ್ಗಾಪ್ರಸಾದ್ ಮತ್ತಿತರರು ಆರೋಪಿಸಿದರು. ಈ ಬಗ್ಗೆ ಲಿಖಿತ ದೂರು ನೀಡಿದರೆ ವೈದ್ಯಕೀಯ ಮಂಡಳಿಗೆ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಭರವಸೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಹಲವು ವೃತ್ತಗಳು ಅಭಿವೃದ್ಧಿಗೊಳ್ಳುತ್ತಿವೆ. ಆದರೆ ಅಂಬೇಡ್ಕರ್ ವೃತ್ತ (ಜ್ಯೋತಿ)ವನ್ನು ಕಡೆಗಣಿಸಲಾಗಿದೆ. ಅಂಬೇಡ್ಕರ್ ವೃತ್ತ ದಲಿತರ ಹಲವು ದಶಕಗಳ ಕನಸು.ಹಾಗಾಗಿ ಕೂಡಲೇ ಅಭಿವೃದ್ಧಿಗೊಳಿಸಲು ಪೊಲೀಸ್ ಇಲಾಖೆಯು ಪಾಲಿಕೆಗೆ ಸೂಚನೆ ನೀಡಬೇಕು ಎಂದು ಅನಿಲ್ ಮನವಿ ಮಾಡಿದರು.
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ನಾನು ದಂಡ ಕಟ್ಟಲು ಬಾಕಿ ಇಲ್ಲ. ಆದರೂ ಪೊಲೀಸರು ಪದೇ ಪದೇ ನನ್ನ ವಾಹನ ವನ್ನು ನಿಲ್ಲಿಸಿ ದಂಡ ಕಟ್ಟಲು ಹೇಳುತ್ತಿದ್ದಾರೆ. ಬ್ಲ್ಯಾಕ್ ಲಿಸ್ಟ್‌ನಲ್ಲಿದ್ದೀರಿ ಎಂದು ಕೂಡ ಹೇಳುತ್ತಿದ್ದಾರೆ ಎಂದು ಅಮಲಾ ಜ್ಯೋತಿ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಡಿಸಿಪಿ ಸೂಚಿಸಿದರು.
ಸಂಚಾರ ಪೊಲೀಸರು ಕರ್ತವ್ಯದ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಾ ನೆರಳಿನಲ್ಲಿ ನಿಂತಿರುವುದು ವಿವಿಧೆಡೆ ಕಂಡುಬರುತ್ತಿದೆ. ನಿಗದಿತ ಸ್ಥಳವನ್ನು ಬಿಟ್ಟು ಎಲ್ಲೋ ದೂರದಲ್ಲಿ ನಿಂತು ಕರ್ತವ್ಯ ನಿರ್ಲಕ್ಷಿಸುತ್ತಿದ್ದಾರೆ. ಶಾಲಾ ಮಕ್ಕಳು ರಸ್ತೆ ದಾಟುವ ವೇಳೆ ಕೂಡ ಕೆಲವೆಡೆ ಪೊಲೀಸರು ಅಲರ್ಟ್ ಆಗಿರುವುದಿಲ್ಲ ಎಂಬ ದೂರು ಸಭೆಯಲ್ಲಿ ಕೇಳಿ ಬಂತು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಎಸಿಪಿ ಎಂ.ಎ ನಟರಾಜ್‌ಗೆ ಡಿಸಿಪಿ ಸೂಚಿಸಿದರು.
ಕೆಲವು ಸಂಚಾರ ಪೊಲೀಸರು ದಿನನಿತ್ಯ ಬಿಸಿಲಿನಲ್ಲೇ ನಿಂತು ಸಂಚಾರ ನಿಯಂತ್ರಿಸುತ್ತಿದ್ದಾರೆ. ಅವರಿಗೆ ಹವಾನಿಯಂತ್ರಿತವಾದ ಬೂತ್ ನಿರ್ಮಿಸಿಕೊಡಬೇಕು ಎಂಬ ಸಲಹೆಯೂ ಕೇಳಿ ಬಂತು. ದಲಿತ ಸಂಘಟನೆಗಳ ಮುಖಂಡರಾದ ದಿನಕರ್ ಮುಚ್ಚೂರು, ಮಂಜುನಾಥ ಮುಲ್ಕಿ, ಜಗದೀಶ್ ಪಾಂಡೇಶ್ವರ, ಅಚ್ಯುತ, ರಘುವೀರ್ ಮತ್ತಿತರರು ಅಹವಾಲುಗಳನ್ನು ಸಭೆಯ ಮುಂದಿಟ್ಟರು.
ಸಭೆಯಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಉಪಸ್ಥಿತರಿದ್ದರು.