×
Ad

ಸಮವಸ್ತ್ರದ ಸುತ್ತೋಲೆ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ: ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ.

Update: 2022-03-27 17:52 IST
ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ.

ಬೆಂಗಳೂರು, ಮಾ. 27: ‘ಪರೀಕ್ಷೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇರುವಾಗ, ಸರಕಾರವು ಎಸೆಸೆಲ್ಸಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿ, ಸುತ್ತೋಲೆ ಹೊರಡಿಸಿದೆ. ಇದು ಕೆಲ ವಿದ್ಯಾರ್ಥಿಗಳಲ್ಲಿ ಆತಂಕವನ್ನು ಉಂಟು ಮಾಡುತ್ತದೆ. ಹಾಗಾಗಿ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾರಣಾಂತರದಿಂದ ಸಮವಸ್ತ್ರ ಧರಿಸದಿದ್ದಲ್ಲಿ ಅಂತಹ ಮಕ್ಕಳ ಮೇಲೆ ಅವರ ಆತ್ಮಸ್ಥೈರ್ಯ ಕುಂದಿಸುವ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು' ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಮನವಿ ಮಾಡಿದ್ದಾರೆ.   

ಈ ಕುರಿತು ಪ್ರಕಟನೆ ನೀಡಿರುವ ಅವರು, ‘ವಾಸ್ತವವಾಗಿ ಅನೇಕ ವಿದ್ಯಾರ್ಥಿಗಳಿಗೆ ಸರಕಾರ ಉಚಿತವಾಗಿ ನೀಡುವ ಸಮವಸ್ತ್ರ ಸಿಗದೇ ಇರುವ ಸಾಧ್ಯತೆ ಇರುತ್ತದೆ. ಜೊತೆಗೆ, ಅನೇಕ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾಯಿಸಿ ಪರೀಕ್ಷೆಗೆ ಹಾಜರಾಗುತ್ತಾರೆ. ಇವರ ಜೊತೆಯಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಈ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಪ್ರಶ್ನೆ ಉದ್ಭವಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. 

‘ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಹೆಚ್ಚಿನ ಆತಂಕ, ಭಯ ಮತ್ತು ಒತ್ತಡವಿರುತ್ತದೆ. ಇಂತಹ ಸಂದರ್ಭದಲ್ಲಿ, ಸಮವಸ್ತ್ರ ಸಿಗದ ಅಥವಾ ಲಭ್ಯವಿಲ್ಲದ, ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಸುತ್ತೋಲೆ ಹೊರಡಿಸಬೇಕಿತ್ತು. ಆದರೆ, ಶೈಕ್ಷಣಿಕ ವರ್ಷದ ಕೊನೆಯವರೆಗೆ ಸಮವಸ್ತ್ರ ಕಡ್ಡಾಯಗೊಳಿಸದೆ, ಪರೀಕ್ಷೆ ಪ್ರಾರಂಭವಾಗುವ ಎರಡು ದಿನಗಳ ಮುನ್ನ ಕಡ್ಡಾಯಗೊಳಿಸುವಂತೆ ಆದೇಶ ಹೊರಡಿಸಿರುವುದು ಮಕ್ಕಳಲ್ಲಿ ಆತಂಕ ಮೂಡಿಸುತ್ತದೆ. ನಿಜಕ್ಕೂ ಇದು ನ್ಯಾಯಸಮ್ಮತವಲ್ಲ' ಎಂದು ಅವರು ಆಕ್ಷೇಪಿಸಿದ್ದಾರೆ.

‘ಈ ಎಲ್ಲ ಕಾರಣಗಳಿಂದ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕೇಂದ್ರವನ್ನಾಗಿಟ್ಟುಕೊಂಡು, ಪರೀಕ್ಷಾ ಸಂದರ್ಭದಲ್ಲಿ ಸಮವಸ್ತ್ರಕ್ಕೆ ಹೆಚ್ಚಿನ ಆದ್ಯತೆ ನೀಡದೆ, ಮಕ್ಕಳ ಭವಿಷ್ಯಕ್ಕೆ ಆದ್ಯತೆ ನೀಡಬೇಕು ಎಂದು ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News