ಆರು-ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ಟಿಪ್ಪುಗೆ ಸಂಬಂಧಿಸಿದ ವಿಚಾರವನ್ನು ಕಿತ್ತು ಹಾಕಿದ ಪರಿಶೀಲನಾ ಸಮಿತಿ

Update: 2022-03-29 03:51 GMT

ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಯ ಆರನೇ ತರಗತಿಯ ಸಮಾಜ ವಿಜ್ಞಾನ ತರಗತಿಯಲ್ಲಿದ್ದ ‘ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ನಡೆಸಿದನು, ರೇಷ್ಮೆ ವ್ಯವಸಾಯ, ರಾಕೆಟ್ ತಂತ್ರಜ್ಞಾನ ಬಳಸಿಕೊಂಡಿದ್ದು, ಹಿಂದೂ ದೇವಾಲಯಗಳಿಗೆ ದಾನದತ್ತಿ, ಶೃಂಗೇರಿ ಮಠಕ್ಕೆ ದೇಣಿಗೆ ನೀಡಿದ್ದ’ ಎಂಬ ಸಾಲನ್ನು, ಏಳನೇ ತರಗತಿಯಲ್ಲಿನ ಸಮಾಜ ವಿಜ್ಞಾನ ವಿಷಯದಲ್ಲಿ ‘ನಮ್ಮ ಕರ್ನಾಟಕ-ಚಾರಿತ್ರಿಕ ಹಿನ್ನೆಲೆ, ಮೈಸೂರು ಒಡೆಯರ್ ಪಾಠದಲ್ಲಿ ಟಿಪ್ಪುಸುಲ್ತಾನ ತಲೆಬರಹದಡಿಯಲ್ಲಿದ್ದ ಮೂರು ಸಾಲುಗಳು ಮತ್ತು ಪೂರಕವಾದ ಮೂರು ಚಿತ್ರಗಳನ್ನು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ಕೈಬಿಟ್ಟಿರುವುದು ಇದೀಗ ಬಹಿರಂಗವಾಗಿದೆ.

ಪಠ್ಯಪುಸ್ತಕ ಪರಿಷ್ಕರಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯು ಮಾರ್ಚ್ 8ರಂದು ನೀಡಿರುವ ವರದಿಯಲ್ಲಿ ಟಿಪ್ಪುಸುಲ್ತಾನ್‌ಗೆ ಸಂಬಂಧಿಸಿದ ಸಾಲುಗಳನ್ನು ಕೈಬಿಟ್ಟಿರುವುದು ತಿಳಿದು ಬಂದಿದೆ.

ಇದೇ ಸಮಿತಿಯು 10ನೇ ತರಗತಿಯ (2021-22ನೇ ಸಾಲಿನವರೆಗಿದ್ದ) ‘ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು’ ಪಾಠದಲ್ಲಿ ಟಿಪ್ಪುಸುಲ್ತಾನ್ ತಲೆಬರಹ ದಡಿಯಲ್ಲಿ ನೀಡಿದ್ದ ಅಂಶಗಳನ್ನು 2022-23ನೇ ಸಾಲಿಗೆ ಪರಿಷ್ಕೃರಿಸುವಾಗ ಯಾವುದೇ ವಿಷಯಾಂಶಗಳನ್ನು ಕೈ ಬಿಟ್ಟಿಲ್ಲ.

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯು ಪಠ್ಯದಲ್ಲಿ ಕೈ ಬಿಟ್ಟಿರುವ ಸಾಲುಗಳು, ಪೂರಕ ಚಿತ್ರಗಳನ್ನೊಳಗೊಂಡ ಪುಟಗಳು ''the-file.in'' ಗೆ ಲಭ್ಯವಾಗಿವೆ.

 ಆರನೇ ತರಗತಿಯ (2020-21ನೇ ಸಾಲಿನವರೆಗಿದ್ದ) ‘ನಮ್ಮ ಕರ್ನಾಟಕ ಪಾಠದಲ್ಲಿ ಚಾರಿತ್ರಿಕ ಹಿನ್ನೆಲೆ’ ಅಡಿಯಲ್ಲಿ ಯದುರಾಯ ಅನ್ನುವವರು ಒಡೆಯರ್ ಮನೆತನದ ಮೊದಲ ಅರಸು. ಚಿಕ್ಕದೇವರಾಯ ಒಡೆಯರ್ ಅವರು ಪ್ರಸಿದ್ಧ ದೊರೆಯಾಗಿದ್ದರು. ಅವರ ನಂತರ ಸಿಂಹಾಸನಕ್ಕೆ ಬಂದ ಅರಸರು ದುರ್ಬಲರಾಗಿದ್ದರು. ಈ ಸಮಯದಲ್ಲಿ ಸೇನಾಧಿಪತಿಯಾಗಿದ್ದ ಹೈದರಾಲಿಯು ಆಳ್ವಿಕೆಯನ್ನು ವಶಪಡಿಸಿಕೊಂಡ. ಅವನು ಮತ್ತು ಅವನ ಮಗ ಟಿಪ್ಪು ಸುಲ್ತಾನ್ 1761ರಿಂದ 1799ರವರೆಗೆ ಆಡಳಿತ ನಡೆಸಿದರು. ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ಟಿಪ್ಪು ನಡೆಸಿದನು. ಫ್ರೆಂಚರ ಜತೆಯಲ್ಲಿ ಸಹಾಯಕ್ಕೆ ಸಂಧಾನ ನಡೆಸಿ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಟಿಪ್ಪು ಸುಲ್ತಾನ್ ಪ್ರಯತ್ನಿಸಿದ. ಟಿಪ್ಪುಸುಲ್ತಾನನು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡನು. ಈ ಸಾಲುಗಳು 2021-22ನೇ ಸಾಲಿನವರೆಗಿದ್ದವು.

 ಆರನೇ ತರಗತಿಯ ನಮ್ಮ ಕರ್ನಾಟಕ ಪಾಠದಲ್ಲಿ ಚಾರಿತ್ರಿಕ ಹಿನ್ನೆಲೆ ಎಂಬ ತಲೆಬರಹವನ್ನು ಕೈ ಬಿಟ್ಟು ಅದರ ಬದಲಿಗೆ ‘ಮೈಸೂರು ವಿಭಾಗ’ಎಂಬ ಶೀರ್ಷಿಕೆ ನೀಡಲಾಗಿದೆ.

  2021-22ನೇ ಸಾಲಿನವರೆಗಿದ್ದ ನಮ್ಮ ಕರ್ನಾಟಕ ಚಾರಿತ್ರಿಕ ಹಿನ್ನೆಲೆಯ ಪಾಠವನ್ನೊಳಗೊಂಡ ಪುಟದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರವಿತ್ತು. 2022-23ನೇ ಸಾಲಿಗೆ ಪರಿಷ್ಕೃರಣೆ ಮಾಡಿರುವ ಸಮಿತಿಯು ಇದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯೀಲ್ ಅವರ ಭಾವಚಿತ್ರಗಳನ್ನು ಉಳಿಸಿಕೊಂಡು ಟಿಪ್ಪು ಸುಲ್ತಾನ್ ಚಿತ್ರವನ್ನು ತೆಗೆದು ಹಾಕಿರುವುದು ತಿಳಿದು ಬಂದಿದೆ.

  2022-23ನೇ ಸಾಲಿಗೆ ಪರಿಸ್ಕೃತ ಪಾಠದಲ್ಲಿ ಹೈದರಾಲಿಯು ಆಳ್ವಿಕೆಯನ್ನು ಅಕ್ರಮವಾಗಿ ವಶಪಡಿಸಿಕೊಂಡ. ಅವನು ಮತ್ತು ಅವನ ಮಗ ಟಿಪ್ಪುಸುಲ್ತಾನ್ 1761ರಿಂದ 1799ರವರೆಗೆ ಆಡಳಿತ ನಡೆಸಿದರು ಎಂದು ಮುಕ್ತಾಯಗೊಳಿಸಿರುವ ಸಮಿತಿಯು ಟಿಪ್ಪು ಸುಲ್ತಾನನ ಮರಣದ ನಂತರ ಮೈಸೂರಿನ ಆಡಳಿತವು ಮತ್ತೆ ಒಡೆಯರ ಕೈಗೆ ಬಂತು. 1831ರಲ್ಲಿ ಬ್ರಿಟಿಷರು ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ 1881ರಲ್ಲಿ ಮತ್ತೆ ಆಳ್ವಿಕೆಯನ್ನು ಒಡೆಯರ ವಶಕ್ಕೆ ನೀಡಿದರು ಎಂದು 2021-22ನೇ ಸಾಲಿನಲ್ಲಿದ್ದ ಸಾಲುಗಳನ್ನೇ 2022-23ನೇ ಸಾಲಿಗೂ ಮುಂದುವರಿಸಲಾಗಿದೆ.

ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ರಮದಲ್ಲಿ 2021-22ನೇ ಸಾಲಿನವರೆಗಿದ್ದ ಮೈಸೂರು ಒಡೆಯರ್ ಪಾಠದಲ್ಲಿ ಟಿಪ್ಪುಸುಲ್ತಾನ ತಲೆಬರಹದಡಿಯಲ್ಲಿ ಕೆಲವು ವಿಷಯಗಳನ್ನು ಪರಿಷ್ಕರಿಸಲು ಸಮಿತಿಗೆ ಒಪ್ಪಿಸಲಾಗಿತ್ತು. 2022-23ನೇ ಸಾಲಿಗೆ ಪರಿಷ್ಕೃತಗೊಂಡಾಗ ಟಿಪ್ಪುವಿನ ವ್ಯಕ್ತಿತ್ವ ಮತ್ತು ಸಾಧನೆಗಳ 4 ಅಂಶಗಳನ್ನು ಹಾಗೂ ಪೂರಕವಾದ 3 ಚಿತ್ರಗಳನ್ನು ಕೈ ಬಿಡಲಾಗಿದೆ.

2021-22ನೇ ಸಾಲಿನವರೆಗೆ ಇದ್ದದ್ದೇನು?

ಟಿಪ್ಪುವಿನ ವ್ಯಕ್ತಿತ್ವ ಮತ್ತು ಸಾಧನೆಗಳು ವಿಷಯದಲ್ಲಿ ವಿಜ್ಞಾನ ಕ್ಷೇತ್ರದ ಸಾಧನೆಗಳ ಬಗ್ಗೆ ಅವನಿಗೆ ಉತ್ತಮ ತಿಳುವಳಿಕೆ ಇತ್ತು. ಅವನು ಒಳ್ಳೆಯ ಗ್ರಂಥಾಲಯವನ್ನು ಹೊಂದಿದ್ದನು. ಬೆಂಗಳೂರಿನ ಅರಮನೆ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ (ದರಿಯಾ ದೌಲತ್) ಕಟ್ಟಿಸಿದನು. ಬೇಸಿಗೆ ಅರಮನೆಯ ಗೋಡೆ, ಚಾವಣಿ ಮತ್ತು ಕಂಬಗಳ ಮೇಲೆ ಚಾರಿತ್ರಿಕ ಸಂಗತಿಗಳನ್ನು ಆಕರ್ಷಕವಾಗಿ ಚಿತ್ರಿಸಲಾಗಿದೆ. (ಬೆಂಗಳೂರು ಅರಮನೆಯ ಚಿತ್ರವಿತ್ತು)

 ಟಿಪ್ಪುರಾಜ್ಯದ ಸಮೃದ್ಧಿಗಾಗಿ ಬಹಳವಾಗಿ ಶ್ರಮಿಸಿದನು. ರೇಷ್ಮೆ ವ್ಯವಸಾಯವನ್ನು ರಾಜ್ಯದಲ್ಲಿ ವ್ಯಾಪಕವಾಗಿ ಜನಪ್ರಿಯಗೊಳಿಸಿದ್ದು ಅವನ ಮುಖ್ಯ ಸಾಧನೆಯಾಗಿದೆ. ಫ್ರೆಂಚ್ ಅಧಿಕಾರಿಗಳ ನೆರವಿನಿಂದ ತನ್ನ ಸೈನ್ಯವನ್ನು ಆಧುನಿಕವಾಗಿ ಸಜ್ಜುಗೊಳಿಸಿದನು. ಶ್ರೀರಂಗಪಟ್ಟಣದಲ್ಲಿ ಫಿರಂಗಿ   ಗಳನ್ನು ಎರಕ ಹೊಯ್ಯುತ್ತಿದ್ದನು. ಟಿಪ್ಪು ರಾಕೆಟ್ ಬಳಸುವ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡದ್ದು ಒಂದು ವಿಶೇಷ. ಟಿಪ್ಪುಕೆಲವು ಹಿಂದೂ ದೇವಾಲಯಗಳಿಗೆ ದಾನದತ್ತಿಯನ್ನೂ ನೀಡಿದ್ದನು. ಶೃಂಗೇರಿ ಮಠಕ್ಕೆ ದೇಣಿಗೆಯನ್ನೂ ನೀಡಿದನು. ಅವನು ಭೂ ಹಿಡುವಳಿಯಲ್ಲಿ ಸುಧಾರಣೆ ಮಾಡಿ ರೈತರಿಗೆ ಸುಲಭ ಕಂತಿನ ಸಾಲ ಒದಗಿಸುವುದನ್ನು ಒಳಗೊಂಡಂತೆ ಅನೇಕ ಸೌಲಭ್ಯಗಳನ್ನು ಒದಗಿಸಿದನು. ಶ್ರೀರಂಗಪಟ್ಟಣದಲ್ಲಿರುವ ಹೈದರಾಲಿಯ ಸಮಾಧಿ ಮತ್ತು ಜುಮಾ ಮಸೀದಿ ಟಿಪ್ಪುವಿನ ಭವ್ಯ ನಿರ್ಮಾಣಗಳು. ಮಸೀದಿಯ ಉನ್ನತವಾದ ಮಿನಾರಗಳು ಆಕರ್ಷಕವಾಗಿವೆ. ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿ ಟಂಕ ಶಾಲೆಗಳನ್ನು ನಿರ್ಮಿಸಿದನು. (ಶ್ರೀರಂಗಪಟ್ಟಣದ ಜುಮ್ಮಾ ಮಸೀದಿ ಚಿತ್ರವಿತ್ತು)

ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಗೆ ನಾನು ಸರ್ವಾಧ್ಯಕ್ಷನಾಗಿದ್ದರೂ ವಿವಿಧ ವಿಷಯಗಳಿಗೆ ಸಂಬಂಧಿಸಿದ 27 ಸಮಿತಿಗಳಿದ್ದವು. ಈ ಸಮಿತಿಗಳಿಗೆ ಪ್ರತ್ಯೇಕವಾಗಿ ಅಧ್ಯಕ್ಷರಿದ್ದರು. ಇವರೆಲ್ಲ ವಿಷಯ ತಜ್ಞರು, ಸಮಾಜ ವಿಜ್ಞಾನ ಪಠ್ಯ ವಿಷಯಗಳನ್ನು, ಇತಿಹಾಸ ವಿಷಯ ತಜ್ಞರೂ ಸೇರಿ ಬರೆದಿದ್ದರು. ಯಾವುದೇ ಪಠ್ಯದಲ್ಲಿ ಅಕಸ್ಮಾತ್ ತಪ್ಪುಮಾಹಿತಿಗಳು ಅರಿವಿಲ್ಲದೇ ಬಂದಿದ್ದರೆ ಅದನ್ನು ತಿದ್ದುವುದು ತಪ್ಪಲ್ಲ. ಮಾಹಿತಿ ಕೊಡುವುದಕ್ಕೆ ಮತ್ತು ಬಿಡುವುದಕ್ಕೆ ಅಧಾರಗಳಿರಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಈಗ ಲಭ್ಯ ಮಾಹಿತಿ ಪ್ರಕಾರ ನಾವು ತಿಳಿಸಿದಂತೆ ಟಿಪ್ಪುವಿಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಕೈ ಬಿಡಲಾಗಿದೆ. ಹಿಂದೆ ಇದ್ದ ಮಾಹಿತಿಗಳು ಆಧಾರ ರಹಿತವಾಗಿರಲಿಲ್ಲ. ಟಿಪ್ಪುಶೃಂಗೇರಿಯನ್ನೂ ಒಳಗೊಂಡಂತೆ ಕೆಲವು ದೇವಾಲಯಗಳಿಗೆ ಸಹಾಯ ಮಾಡಿದ ವಿಷಯವನ್ನು ಚರಿತ್ರೆಕಾರರು ಹಿಂದಿನಿಂದ ಹೇಳಿದ್ದಾರೆ. ಆತನ ಯೋಜನೆಗಳ ಕುರಿತೂ ಹಿಂದಿನಿಂದ ಹೇಳಲಾಗಿದೆ. ಇವು ಆಧಾರರಹಿತ ಎನ್ನಲು ಆಧಾರ ಕೊಡಬೇಕಾಗುತ್ತದೆ. ಟಿಪ್ಪುವನ್ನು ಮೈಸೂರು ಹುಲಿ ಎಂದು ಕರೆಯುವ ರೂಢಿಯಿದೆ. ಇದು ಹೋಗಲಿ ಎಂದರೆ ಉಳಿದವನ್ನು ತೆಗೆಯಲು ಕಾರಣಗಳಿಲ್ಲ. ಅಲ್ಲೆಲ್ಲಾ ಮಾಹಿತಿಯಿದೆ; ಅಗನತ್ಯ ವೈಭವೀಕರಣವಿಲ್ಲ. ಹುಸಿ ವೈಭವೀಕರಣವಾಗಿದ್ದರೆ ತಿದ್ದುಪಡಿ ಮಾಡಲಿ ತಪ್ಪೇನಿಲ್ಲ. ಆದರೆ ಯಾವುದೇ ಪಠ್ಯಪುಸ್ತಕಗಳು ಯಾವುದೇ ಪಕ್ಷ ಪುಸ್ತಕಗಳಲ್ಲ. ಹಾಗೆ ಆಗಬಾರದು.

 ಬರಗೂರು ರಾಮಚಂದ್ರಪ್ಪ, ಖ್ಯಾತ ಸಾಹಿತಿ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷರು

ಸಮಿತಿ ಪರಿಷ್ಕರಿಸಿದ್ದೇನು?

ಟಿಪ್ಪುವಿನ ವ್ಯಕ್ತಿತ್ವ ಮತ್ತು ಸಾಧನೆಗಳು ಎಂಬ ತಲೆಬರಹದ ಬದಲಿಗೆ ಟಿಪ್ಪುಸುಲ್ತಾನ್ ಎಂದಷ್ಟೇ ಉಳಿಸಿಕೊಳ್ಳಲಾಗಿದೆ. ತನ್ನ ತಂದೆಯ ಕಾಲದ ಯುದ್ಧಗಳಲ್ಲಿ ಪಾಲ್ಗೊಂಡು ವಿಜಯವನ್ನು ಗಳಿಸಿದ ಟಿಪ್ಪುಸುಲ್ತಾನ್ ಧೀರ ತರುಣನಾಗಿದ್ದ. ತನ್ನನ್ನು ಸುಲ್ತಾನನೆಂದು ಘೋಷಿಸಿ ತನ್ನ ರಾಜ್ಯ ‘ದೈವದತ್ತ’ವೆಂದು ಪ್ರಕಟಿಸಿಕೊಂಡ. ತಂದೆಯ ಮರಣಾನಂತರ ಆಗ ನಡೆಯುತ್ತಿದ್ದ ಯುದ್ಧವನ್ನು ಟಿಪ್ಪು ಮುಂದುವರಿಸಿದ. ಆತನ ಸಹಾಯಕ್ಕೆ ಯಾರೂ ಬರಲಿಲ್ಲ. ಟಿಪ್ಪು ಏಕಾಂಗಿಯಾಗಿ ಬ್ರಿಟಿಷರನ್ನು ಎದುರಿಸಲಾರದೆ ಮಂಗಳೂರಿನಲ್ಲಿ ಒಪ್ಪಂದ ಮಾಡಿಕೊಂಡ. ಮಂಗಳೂರು ಒಪ್ಪಂದ ಉಭಯ ಪಕ್ಷದವರಿಗೂ ಹಿತಕರವಾಗಿದ್ದಿತು. ಇಬ್ಬರೂ ಗೆದ್ದಿದ್ದ ಪ್ರದೇಶಗಳನ್ನು ಬಿಟ್ಟುಕೊಟ್ಟು ಯುದ್ಧ ಕೈದಿಗಳನ್ನು ಹಿಂತಿರುಗಿಸಿದರು.

ಅಲ್ಪಕಾಲದಲ್ಲೇ ಟಿಪ್ಪುಮತ್ತು ಬ್ರಿಟಿಷರ ನಡುವೆ ಇನ್ನೆರಡು ಯುದ್ಧಗಳು ನಡೆದವು. ಟಿಪ್ಪು ಮತ್ತು ಬ್ರಿಟಿಷರ ನಡುವಣ ಪರಸ್ಪರ ದ್ವೇಷ ಮತ್ತು ಅಪನಂಬಿಕೆಯೇ ಈ ಯುದ್ಧಗಳಿಗೆ ಮೂಲ ಕಾರಣವಾಗಿತ್ತು. ಮೂರನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಆಕ್ರಮಣ ಮಾಡುತ್ತಾ ರಾಜಧಾನಿಯಾದ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದರು. ಬೇರೆ ಮಾರ್ಗ ತೋಚದೆ ಟಿಪ್ಪು ಬ್ರಿಟಿಷರೊಡನೆ ಶಾಂತಿ ಒಪ್ಪಂದ ಮಾಡಿಕೊಂಡನು. ಶಾಂತಿ ಒಪ್ಪಂದದಂತೆ ಅವನು ಅರ್ಧ ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದನು. ಅಪಾರ ಪರಿಹಾರ ಧನವನ್ನು ಅವರಿಗೆ ನೀಡಬೇಕಾಯಿತು.

ತನ್ನಿಬ್ಬರು ಮಕ್ಕಳನ್ನು ಕೂಡ ಬ್ರಿಟಿಷರಿಗೆ ಒತ್ತೆಯಾಳಾಗಿ ಕೊಡಬೇಕಾಯಿತು.

 ಯುದ್ಧದ ಪರಿಣಾಮವಾಗಿ ಟಿಪ್ಪು ಅವಮಾನ ಗೊಂಡನು. ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ದೃಢಸಂಕಲ್ಪಮಾಡಿದನು. ಇದು ನಾಲ್ಕನೆಯ ಮೈಸೂರು ಯುದ್ಧಕ್ಕೆ ನಾಂದಿಯಾಯಿತು. ಯುದ್ಧದಲ್ಲಿ ಶ್ರೀರಂಗಪಟ್ಟಣವು ಮುತ್ತಿಗೆಗೊಳಗಾಯಿತು. ಟಿಪ್ಪು ವೀರಾವೇಶದಿಂದ ಹೋರಾಡಿ ಅಸುನೀಗಿದ. ಟಿಪ್ಪುವು ಮೈಸೂರಿನ ಹುಲಿಯೆಂದು ಪ್ರಸಿದ್ಧನಾಗಿದ್ದಾನೆ. ಟಿಪ್ಪು ಸುಲ್ತಾನನ ಮರಣಾನಂತರ ಮೈಸೂರು ರಾಜ್ಯವು ಬ್ರಿಟಿಷರ ವಶವಾಯಿತು. ಬ್ರಿಟಿಷರು ಒಡೆಯರ ರಾಜವಂಶದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ರಾಜ್ಯವನ್ನು ಹಸ್ತಾಂತರಿಸಿದರು. ಅದರೆ ಮೈಸೂರು ಬ್ರಿಟಿಷರ ಆಶ್ರಿತ ರಾಜ್ಯವಾಯಿತು ಎಂದು ಪರಿಷ್ಕರಿಸಲಾಗಿದೆ.

ಬೆಂಗಳೂರಿನ ಅರಮನೆ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ, ರೇಷ್ಮೆ ವ್ಯವಸಾಯ, ರಾಕೆಟ್ ತಂತ್ರಜ್ಞಾನ ಬಳಸಿಕೊಂಡದ್ದು, ಹಿಂದೂ ದೇವಾಲಯಗಳಿಗೆ ದಾನದತ್ತಿ, ಶೃಂಗೇರಿ ಮಠಕ್ಕೆ ದೇಣಿಗೆ ನೀಡಿದ್ದು, ಭೂಹಿಡುವಳಿಯಲ್ಲಿ ತಂದಿದ್ದ ಸುಧಾರಣೆ, ರೈತರಿಗೆ ಸುಲಭ ಕಂತಿನ ಸಾಲ ಒದಗಿಸಿದ್ದು, ಹೈದರಾಲಿ ಸಮಾಧಿ, ಜುಮಾ ಮಸೀದಿ, ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿ ಟಂಕ ಶಾಲೆಗಳನ್ನು ನಿರ್ಮಿಸಿದ್ದನ್ನು ಕೈಬಿಟ್ಟಿರುವುದು ಪರಿಷ್ಕೃತ ಪಠ್ಯದಿಂದ ತಿಳಿದು ಬಂದಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News