ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಆಯೋಗದಿಂದ ನೇರ ಸಂವಾದ: ಎಂ.ಶಿವಣ್ಣ
ರಾಮನಗರ, ಮಾ.29: ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ವತಿಯಿಂದ ನೇರ ಸಂವಾದವನ್ನು ನಡೆಸಲಾಗುತ್ತಿದ್ದು, ಪೌರಕಾರ್ಮಿಕರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುವಂತೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ತಿಳಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪೌರಕಾರ್ಮಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕ ಮಹಿಳೆಯರು ತಮಗೆ ಇರುವ ಸಮಸ್ಯೆಗಳ ಬಗ್ಗೆ ತಿಳಿಸಬೇಕು. ಕೆಲಸ ಮಾಡುವ ಸಂದರ್ಭದಲ್ಲಿ ವಿಶ್ರಾಂತಿ ಗೃಹ, ಹಬ್ಬದ ದಿನಗಳಲ್ಲಿ ರಜೆ ಸೇರಿದಂತೆ ಹಲವಾರು ಸಮಸ್ಯೆಗಳು ಇರುತ್ತದೆ. ಅವುಗಳನ್ನು ಆಯೋಗದ ಗಮನಕ್ಕೆ ತರಬೇಕು ಎಂದರು.
ಜಿಲ್ಲಾ ಜಗೃತ ಸಮಿತಿ ಸದಸ್ಯ ನಾಗರಾಜು ಮಾತನಾಡಿ, ಪೌರಕಾರ್ಮಿಕರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು. ಪೊಲೀಸ್ ಇಲಾಖೆಯಲ್ಲಿ ನೀಡಲಾಗುವ ಹೆಲ್ತ್ ಕಾರ್ಡ್ ರೀತಿ ಪೌರಕಾರ್ಮಿಕರಿಗೆ ನೀಡಬೇಕು. ಅವರ ಕುಟುಂಬಕ್ಕೂ ಸಹ ಆರೋಗ್ಯ ವಿಮೆ ಒದಗಿಸಬೇಕು. ಪೌರಕಾರ್ಮಿಕರಿಗೆ ಜಿ-1, ಜಿ-2 ರೀತಿ ಮನೆ ನೀಡುವ ಬದಲು 30/40 ಅಡಿ ನಿವೇಶನ ನೀಡಬೇಕು ಇದರಿಂದ ಅವರು ಭೂ ಮಾಲಕರಾಗುತ್ತಾರೆ. ಪೌರಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವಂತೆ ಮನವಿ ಸಲ್ಲಿಸಿದರು.
ನೇರಪಾವತಿ ಪೌರಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಛಲಪತಿ ಮಾತನಾಡಿ, 2ನೇ ಹಂತದ ನೇರ ಪಾವತಿ ಪೌರಕಾರ್ಮಿಕರನ್ನು ಖಾಯಂ ಮಾಡಬೇಕು. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಲಭ್ಯವಿರುವ ಸರಕಾರಿ ಭೂಮಿ ಗುರುತಿಸಿ, ನೇರ ವೇತನ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಬೇಕು. ನೇರ ಪಾವತಿ ಪೌರಕಾರ್ಮಿಕರ ಬೆಳಗಿನ ಉಪಾಹಾರಕ್ಕೆ ನಿಗಧಿಪಡಿಸಿರುವ 20 ರಿಂದ 50 ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಅಧಿಕಾರಿಗಳು ನಿಯಮ ತಿಳಿದುಕೊಳ್ಳಿ: ಮ್ಯಾನುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ-2013 ರ ಕಾಯ್ದೆ ಹಾಗೂ ನಿಯಮಗಳನ್ನು ಅಧಿಕಾರಿಗಳು ತಿಳಿದುಕೊಂಡು ಕಾರ್ಯನಿರ್ವಹಿಸಬೇಕು. ಇದನ್ನು ಲಘುವಾಗಿ ಪರಿಗಣಿಸಿ ಕಾಯ್ದೆ ಉಲ್ಲಂಘಿಸಿದಲ್ಲಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು.
ಸಭೆಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರಮಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಶಿವಕುಮಾರ ಸ್ವಾಮಿ, ಉಪವಿಭಾಗಾಧಿಕಾರಿ ಮಂಜುನಾಥ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಮೇಶ್, ರಾಮನಗರ ನಗರಸಭೆ ಆಯುಕ್ತ ನಂದ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಲಲಿತಾ ಬಾಯಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.