×
Ad

ಎ.16ರಂದು ಬೆಂಗಳೂರಿನಲ್ಲಿ ಬುದ್ಧಿಜೀವಿಗಳು, ಚಿಂತಕರ ಸಮಾವೇಶ

Update: 2022-03-29 20:32 IST

ಬೆಂಗಳೂರು, ಮಾ.29: ನಮ್ಮ ರಾಜ್ಯ, ನಮ್ಮ ದೇಶ ಹಾಗೂ ಅಸಹಾಯಕ ಸಮುದಾಯಗಳನ್ನು ಉಳಿಸಿಕೊಳ್ಳಲು ಆರಂಭಿಸಿರುವ ನಮ್ಮ ಪ್ರಯತ್ನವನ್ನು ನಿರಂತರವಾಗಿ ಮುಂದುವರೆಸುತ್ತೇವೆ. ಸಮಾಜದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸುವ ಶಕ್ತಿಗಳನ್ನು ಮುಂದಕ್ಕೆ ಹೋಗಲು ನಾವು ಬಿಡುವುದಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಹೇಳಿದರು.

ಹಿಜಾಬ್, ಕಾಶ್ಮೀರ್ ಫೈಲ್ಸ್ ಸಿನಿಮಾ, ಜಾತ್ರೆ ಮತ್ತು ದೇವಸ್ಥಾನಗಳ ಬಳಿ ಮಾರಾಟ ನಿಷೇಧ, ಹಲಾಲ್ ಕಟ್ ಮಾಂಸ ಸೇರಿದಂತೆ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಸಂಘಪರಿವಾರ ಹಾಗೂ ಅದರ ಅಂಗ ಸಂಸ್ಥೆಗಳು ಜನಸಾಮಾನ್ಯರ ಮನಸ್ಸುಗಳಲ್ಲಿ ದ್ವೇಷ ಬಿತ್ತುವ ಕೆಲಸವನ್ನು ಮಾಡುತ್ತಿರುವ ಬಗ್ಗೆ ಸಮನ್ವಯ ಬೆಂಗಳೂರು ಸಂಘಟನೆ ವತಿಯಿಂದ ಮಂಗಳವಾರ ಶಾಸಕರ ಭವನದಲ್ಲಿ ಆಯೋಜಿಸಲಾಗಿದ್ದ ಚಿಂತನಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋಮುವಾದಿಗಳು ನಡೆಸುತ್ತಿರುವ ಈ ಅಪಪ್ರಚಾರಗಳಿಗೆ ಎಲ್ಲ ದುರ್ಬಲ ವರ್ಗಗಳು ಒಗ್ಗೂಡಿ ಉತ್ತರಿಸಬೇಕು. ಮತೀಯವಾದಿಗಳು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ಇವರಿಗೆ ತಕ್ಕ ಉತ್ತರ ನೀಡಲು ನಾವು ಭಾವನಾತ್ಮಕವಾಗುವ ಬದಲು ಜನರಿಗೆ ಸತ್ಯದ ಆಧಾರದಲ್ಲಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ನಿರಂತವಾದ ಪ್ರಯತ್ನ ಮಾಡಬೇಕಿದೆ ಎಂದು ಅವರು ಹೇಳಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮರನ್ನು ಆಕ್ರಮಣಕಾರಿಯಾಗಿ ಟಾರ್ಗೆಟ್ ಮಾಡುತ್ತಿರುವ ರೀತಿಗೆ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಮೌನ ವಹಿಸಿದೆ ಎಂಬ ಭಾವನೆ ಮೂಡುತ್ತಿದೆ. ಹಿಜಾಬ್ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ, ಇಡೀ ಕಾಂಗ್ರೆಸ್ ನಾಯಕತ್ವವೇ ಅವರಿಗೆ ಅಡ್ಡಗಾಲು ಹಾಕಿದಂತಿದೆ. ಮತೀಯವಾದಿ ಶಕ್ತಿಗಳಿಗೆ ತಕ್ಕ ಉತ್ತರ ನೀಡುವ ಸಾಮಥ್ರ್ಯ ಇರುವ ಕಾಂಗ್ರೆಸ್ ಪಕ್ಷವೇ ಈ ರೀತಿ ಮೌನ ವಹಿಸಿದರೆ ಹೇಗೆ? ಎಂದು ಟೀಕಿಸಿದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಆಘಾತಕಾರಿಯಾಗಿವೆ. ಸಮಾಜದಲ್ಲಿ ಶಾಂತಿಯನ್ನು ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಈ ಹಿನ್ನೆಲೆಯಲ್ಲಿ ಸಾಹಿತಿಗಳು, ಚಿಂತಕರು ಹಾಗೂ ಪ್ರಗತಿಪರರೊಂದಿಗೆ ಚಿಂತನಾ ಸಭೆಯನ್ನು ನಡೆಸಲಾಗಿದೆ. ಉತ್ತಮವಾದ ಸಲಹೆಗಳು ಮೂಡಿಬಂದಿವೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ತಿಳಿಸಿದರು.

ನಮ್ಮ ರಾಜ್ಯದ ಶಾಂತಿ, ಸೌಹಾರ್ದತೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರು, ಮಠಾಧೀಶರನ್ನು ಭೇಟಿ ಮಾಡಿ ಅವರ ಮೂಲಕ ಸಮಾಜಕ್ಕೆ ಐಕ್ಯತೆ, ಸಹಭಾಳ್ವೆಯ ಸಂದೇಶ ನೀಡಲು ಉದ್ದೇಶಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಎ.16ರಂದು ಬೆಂಗಳೂರಿನಲ್ಲಿ ಬುದ್ಧಿಜೀವಿಗಳು, ಚಿಂತಕರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಚಿಂತನಾ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಶಾಸಕ ಎನ್.ಎ.ಹಾರೀಸ್, ಪ್ರೊ.ಕೆ.ಇ.ರಾಧಾಕೃಷ್ಣ,  ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಸುಂಧರಾ ಭೂಪತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಪತ್ರಕರ್ತ ಬಿ.ಎಂ.ಹನೀಫ್, ಹೋರಾಟಗಾರರಾದ ವಿಮಲಾ, ಡಾ. ಎಚ್. ವಿ ವಾಸು, ಪ್ರಭಾ, ರುದ್ರಪ್ಪ ಹನಗವಾಡಿ, ರಾ.ಚಿಂತನ್, ಮುದಬ್ಬೀರ್ ಅಹ್ಮದ್ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News