ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು, ಮಾ.30: ಪಿಎಸ್ಸೈ ನೇಮಕಾತಿಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಬುಧವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂಥ್ ಬಳಕೆ ಮಾಡಿ ಅಭ್ಯಾಸ ನಡೆಸುತ್ತಿದ್ದ ಮಾಹಿತಿ ಆಧರಿಸಿ ಬೆಳಗಾವಿ, ಕಲಬುರ್ಗಿ ಸೇರಿ ಕೆಲವು ಕಡೆ ಹೊಟೇಲ್ ಮೇಲೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಇದೇ ವೇಳೆ, ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂದು ಆ ಭಾಗದ ಸದಸ್ಯರು ಆಕ್ಷೇಪಿಸಿದಾಗ ಅದನ್ನು ಪರಿಶೀಲಿಸಲು ಮುಖ್ಯಮಂತ್ರಿ ಅವರು ನೇಮಕಾತಿ ಪಟ್ಟಿಗೆ ತಡೆ ನೀಡಿದ್ದಾರೆ. ಅದನ್ನು ಹೊರತುಪಡಿಸಿ ಯಾವುದೇ ಅವ್ಯವಹಾರ ನಡೆದಿಲ್ಲ. ಅದಕ್ಕಾಗಿ ತಡೆ ನೀಡಿಲ್ಲ ಎಂದರು.
ಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಹಣದ ವ್ಯವಹಾರವೂ ಇಲ್ಲ. ಪರೀಕ್ಷೆಯಲ್ಲಿ ನಕಲು ನಡೆದಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಸದಸ್ಯರಿಗೆ ಕ್ಷೇತ್ರವಾರು ಫಲಿತಾಂಶ ಒದಗಿಸುತ್ತೇನೆ. ಒಂದೇ ಕ್ಷೇತ್ರದ ಹಾಗೂ ಒಂದೇ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆಯಾಗಿದ್ದಾರೆ ಎಂಬುದು ಸರಿಯಲ್ಲ ಎಂದು ಅವರು ನುಡಿದರು.