ಎಚ್.ಎಸ್. ಅನುಪಮಾ ಸೇರಿ 7 ಲೇಖಕರು ಸ್ವಾಭಿಮಾನಿ ಪುಸ್ತಕ ಪ್ರಶಸ್ತಿಗೆ ಆಯ್ಕೆ
ಬೆಂಗಳೂರು, ಮಾ.30: ಲೇಖಕಿ ಎಚ್.ಎಸ್.ಅನುಪಮಾ ಸೇರಿ 7 ಲೇಖಕರು ಸ್ವಾಭಿಮಾನಿ ಕರ್ನಾಟಕ ವೇದಿಕೆ ಕೊಡಮಾಡುವ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ 2021ರಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಆಹ್ವಾನಿಸಿತ್ತು. ಪ್ರಶಸ್ತಿಗಾಗಿ 250 ಕೃತಿಗಳು ಬಂದಿದ್ದು, ಅವುಗಳಲ್ಲಿ ಅತ್ಯುತ್ತಮವಾದ ಆರು ಕನ್ನಡ ಕೃತಿಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಕಾವ್ಯ ವಿಭಾಗದಲ್ಲಿ ಇಬ್ಬರು ಬಹುಮಾನವನ್ನು ಹಂಚಿಕೊಂಡಿದ್ದಾರೆ. ಪ್ರಶಸ್ತಿಯು ತಲಾ 5,000ರೂ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಕಥಾ ಸಂಕಲನ ವಿಭಾಗದಲ್ಲಿ ಡಾ. ಎಚ್.ಎಸ್. ಅನುಪಮಾ ಅವರ ಕೋವಿಡ್ ಡಾಕ್ಟರ್ ಡೈರಿ ಕೃತಿ ಆಯ್ಕೆಯಾಗಿದೆ. ಕಾದಂಬರಿ ವಿಭಾಗದಲ್ಲಿ ಪೂರ್ಣಿಮಾ ಮಾಳಗಿಮನಿ ಅವರ ಇಜಯಾ ಕೃತಿಗೆ ಪ್ರಶಸ್ತಿ ಗಳಿಸಿದೆ. ಕಾವ್ಯ ವಿಭಾಗದಲ್ಲಿ ಡಾ.ಮುಮ್ತಾಜ್ ಬೇಗಂ ಅವರ ಕೊಂದ ಕನಸುಗಳ ಕೇಸು ಕೃತಿ ಹಾಗೂ ದೇವು ಮಾಕೊಂಡ ಅವರ ಗಾಳಿಗೆ ತೊಟ್ಟಿಲ ಕಟ್ಟಿ ಕೃತಿ ಆಯ್ಕೆ ಆಗಿವೆ. ಸತೀಶ್ ಕುಮಾರ್ ಎಸ್. ಹೊಸಮನಿ ಅವರ ಪ್ರತಿಬಿಂಬ ಕೃತಿಯು ಆತ್ಮಕಥನ ವಿಭಾಗದಲ್ಲಿ ಆಯ್ಕೆಯಾದರೆ, ಆಕರ್ಷ ರಮೇಶ್ ಕಮಲ ಅವರ ಬರಿಯ ನೆನಪಲ್ಲ ಕೃತಿ ಅನುವಾದ ವಿಭಾಗದಲ್ಲಿ ಆಯ್ಕೆಗೊಂಡಿದೆ. ವಿಮರ್ಶೆ ವಿಭಾಗದಲ್ಲಿ ನಳಿನಿ ಡಿ. ಅವರ ಕುವೆಂಪು ಮತ್ತು ರವೀಂದ್ರನಾಥ್ ಠಾಕೂರ್ ಒಂದು ತೌಲನಿಕ ಅಧ್ಯಯನ ಕೃತಿ ಆಯ್ಕೆಯಾಗಿದೆ.
ವಿಮರ್ಶಕ ಎಚ್.ದಂಡಪ್ಪ, ಲೇಖಕ ದ್ವಾರನಕುಂಟೆ ಪಾತಣ್ಣ ಹಾಗೂ ಪತ್ರಕರ್ತ ಸಂದೀಪ ನಾಯಕ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಎ. 16ರ ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಲ್ಲಿ ನಡೆಯಲಿರುವುದಾಗಿ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ಅಧ್ಯಕ್ಷರಾದ ದ್ವಾರನಕುಂಟೆ ಪಾತಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.