×
Ad

ಆನ್‌ಲೈನ್ ಬ್ಯಾಂಕ್ ವಂಚನೆ ತಡೆಗೆ ವ್ಯಾಪಕ ಜಾಗೃತಿ ಮೂಡಿಸಿ: ಡಾ.ನವೀನ್ ಭಟ್

Update: 2022-03-30 20:52 IST

ಉಡುಪಿ : ಸೈಬರ್ ಕ್ರೈಮ್‌ಗಳು ಹಾಗೂ ಆನ್‌ಲೈನ್ ಮೂಲಕ ಬ್ಯಾಂಕ್ ಗ್ರಾಹಕರನ್ನು ವಂಚಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗು ತ್ತಿದ್ದು, ಈ ಬಗ್ಗೆ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು ಗ್ರಾಮೀಣ ಭಾಗದ ಬ್ಯಾಂಕ್ ಗ್ರಾಹಕರಿಗೆ ಗ್ರಾಪಂ ಮಟ್ಟದಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಂಥ ವಂಚನೆಯಿಂದ ಗ್ರಾಹಕರನ್ನು ಪಾರು ಮಾಡುವ ಅಗತ್ಯವಿದೆ ಎಂದು ಉಡುಪಿ ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಬುಧವಾರ ಮಣಿಪಾಲದಲ್ಲಿರುವ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲೆಯ ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತಿದ್ದರು. 

ಬ್ಯಾಂಕ್‌ನ ಗ್ರಾಹಕರ ಮೊಬೈಲ್‌ಗೆ ಬರುವ ವಿವಿಧ ರೀತಿಯ ವಂಚನೆ ಕರೆಗಳ ಕುರಿತಂತೆ ಮಾಹಿತಿ ನೀಡಿ, ತಮ್ಮ ಮೊಬೈಲ್‌ಗೆ ಬರುವ ಓಟಿಪಿಯನ್ನು ಇತರರಿಗೆ ನೀಡದಂತೆ ಎಚ್ಚರಿಸಿ ಹಾಗೂ ವಂಚನೆಗೊಳಗಾದಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ತಿಳಿಸಲು ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ತಿಳಿಸಿದರು. ಈ ಮೂಲಕ ಮುಗ್ದ ಸಾರ್ವಜನಿಕರು  ಆನ್‌ಲೈನ್ ವಂಚನೆಗಳಿಂದ ಆರ್ಥಿಕ ನಷ್ಟಕ್ಕೊಳಗಾಗದಂತೆ ತಡೆಯಬೇಕೆಂದು ಸಲಹೆ ನೀಡಿದರು.

ಸಮಿತಿ ರಚನೆಗೆ ಕರೆ: ಸರಕಾರದ ವಿವಿಧ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ನೀಡಿದ ದಾಖಲೆಗಳನ್ನು ಪರಿಶೀಲಿಸಲು ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಅಧ್ಯಕ್ಷತೆಯಲ್ಲಿ ಸಂಬಂಧಿತ ಅಧಿಕಾರಿಗಳ ಸಮಿತಿ ಯೊಂದನ್ನು ರಚಿಸುವಂತೆಯೂ ಡಾ.ಭಟ್ ಸಲಹೆ ನೀಡಿದರು.

ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆಯಲ್ಲಿ, ವಿವಿಧ ಯೋಜನೆಗಳಡಿಯಲ್ಲಿ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಾಲದ ಅರ್ಜಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಿರಸ್ಕೃತ ಗೊಳಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಇದನ್ನು ತಪ್ಪಿಸಲು ಜಿಲ್ಲಾ ಲೀಡ್‌ಬ್ಯಾಂಕ್ ಮ್ಯಾನೇಜರ್ ಅಧ್ಯಕ್ಷತೆಯಲ್ಲಿ ಒಂದು ಪ್ರತ್ಯೇಕ ಸಮಿತಿಯನ್ನು ರಚಿಸಿ, ಎಲ್ಲಾ ಬ್ಯಾಂಕ್‌ಗಳು ತಮ್ಮಲ್ಲಿಗೆ ಬರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಾಲದ ಅರ್ಜಿಗಳು ಸೇರಿದಂತೆ ಎಲ್ಲಾ ಅರ್ಜಿಗಳನ್ನು ಇಲ್ಲಿಗೆ ಕಳುಹಿಸಿ ಈ ಸಮಿತಿಯೇ ಅರ್ಜಿಗಳನ್ನು ಪರಿಶೀಲಿಸಿ ಸಾಲ ಮಂಜೂರು ಮಾಡುವಂತೆ ಸೂಚಿಸಿದರು.

ಆಧಾರ್ ಸೀಡಿಂಗ್: ಜಿಲ್ಲೆಯಲ್ಲಿ ನರೇಗಾ ಯೋಜನೆಯ ಪ್ರಗತಿ ಉತ್ತಮವಾಗಿದ್ದು, ಯೋಜನೆಯಡಿ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ವೇತನ ಪಾವತಿಸುವ ಸಂದರ್ಭದಲ್ಲಿ ಆಧಾರ್ ಸೀಡಿಂಗ್‌ನಿಂದ ಸಮಸ್ಯೆ ಗಳಾಗುತ್ತಿವೆ. ಜಿಲ್ಲೆಯ ಒಟ್ಟು 73,000 ನರೇಗಾ ಕಾರ್ಡುಗಳಲ್ಲಿ 30000 ಕಾರ್ಡುಗಳಿಗೆ ಮಾತ್ರ ಆಧಾರ್ ಸೀಡಿಂಗ್ ಆಗಿದ್ದು, ಉಳಿದ ೪೩,೦೦೦ ಕಾರ್ಡುಗಳಿಗೆ ಸೀಡಿಂಗ್ ಆಗಿಲ್ಲ. ಇದರಿಂದ ಕಾರ್ಮಿಕರಿಗೆ ಅವರು ಮಾಡಿದ ಕೆಲಸದ ಹಣ ಬ್ಯಾಂಕ್ ಖಾತೆಗೆ ಪಾವತಿಯಾಗುತ್ತಿಲ್ಲ. ಈ ಸಮಸ್ಯೆಯನ್ನು ೧ ತಿಂಗಳ ಒಳಗೆ ಬಗೆಹರಿಸುವಂತೆ ಸೂಚಿಸಿದರು.

ಕನ್ನಡ ಬಾರದವರ ಸಮಸ್ಯೆ: ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡಲು ಬಾರದ ಅಧಿಕಾರಿಗಳಿಂದ ದೈನಂದಿನ  ವ್ಯವಹಾರ ನಿರ್ವಹಿಸಲು ಸಾರ್ವಜನಿಕರಿಗೆ ಸಮಸ್ಯೆಗಳಾಗುತ್ತಿದ್ದು, ಪ್ರಸ್ತುತ ಬ್ಯಾಂಕ್‌ಗಳಲ್ಲಿ ಇರುವ ಹೊರರಾಜ್ಯದ ಅಧಿಕಾರಿಗಳಿಗೆ ಕಡ್ಡಾಯವಾಗಿ ಕನ್ನಡ ಕಲಿಯುವ ಕುರಿತು ಹಾಗೂ ಅಧಿಕಾರಿಗಳ ವಾರ್ಷಿಕ ವರದಿಯಲ್ಲಿ  ಕನ್ನಡ ಪರೀಕ್ಷೆ ಉತ್ತೀರ್ಣರಾಗಿ ರುವುದನ್ನು ನಮೂದಿಸುವ ಬಗ್ಗೆ ಈ ಸಭೆಯ ಮೂಲಕ ರಾಜ್ಯಮಟ್ಟದ ಸಮಿತಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ಅಲ್ಲದೇ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳಲ್ಲಿ ಒಬ್ಬರಾದರೂ ಕನ್ನಡ ಬಲ್ಲವರನ್ನು ನೇಮಿಸುವಂತೆ ಕ್ರಮಕೈಗೊಳ್ಳ ಬೇಕೆಂದು ಅವರು ಸೂಚಿಸಿದರು. 

ಹೆಚ್ಚಿದ ಸಿಡಿ ಅನುಪಾತ: ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಶೇ.೩.೮ ರಷ್ಟು ಪ್ರಗತಿಯಾಗಿದ್ದು ಶೇ.೪೩.೩೯ರಿಂದ ಶೇ.೪೭.೨೨ಕ್ಕೆ ಹೆಚ್ಚಿದೆ. ಆದರೆ ಇದನ್ನು ಶೇ.೬೦ಕ್ಕೆ ಏರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಡಾ.ಭಟ್ ನುಡಿದರು.

ವಿವಿಧ ಸರಕಾರಿ ಯೋಜನೆಗಳಡಿ ಸಲ್ಲಿಕೆಯಾಗುವ ಸಾಲದ ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿ ಫಲಾನುಭವಿಗಳಿಗೆ ಬಿಡುಗಡೆ ಮಾಡುವಂತೆ ಹಾಗೂ ಎಲ್ಲಾ ಬ್ಯಾಂಕ್‌ಗಳು ಮತ್ತು ಸರಕಾರಿ ಇಲಾಖೆಗಳು ಉತ್ತಮ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಹೇಳಿದರು.

ಬ್ಯಾಂಕ್‌ಗಳು ಜನಸ್ನೇಹಿಯಾಗಿ ಕಾರ್ಯನಿರ್ವಸಿದರೆ ಬ್ಯಾಂಕಿನ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ ಎಂದ ಅವರು, ಸಾಲಮೇಳ ಗಳನ್ನು ನಡೆಸುವುದು ಸೇರಿದಂತೆ ಸರಕಾರಿ ಇಲಾಖೆಗಳ ಕಾರ್ಯಕ್ರಮಗಳಲ್ಲಿ, ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಆರ್‌ಬಿಐನ ಎಜಿಎಂ ತನು ನಂಜಪ್ಪ ಮಾತನಾಡಿ, ಠೇವಣಿ ಹಾಗೂ ಸಾಲ ನೀಡುವಿಕೆಯ ಅನುಪಾತ ಕೆಲವು ಬ್ಯಾಂಕ್‌ಗಳಲ್ಲಿ ತುಂಬಾ ಕಡಿಮೆ ಇದೆ ಎಂದ ಅವರು ಎಲ್ಲಾ ಕ್ಷೇತ್ರದವರಿಗೂ ಅದರಲ್ಲೂ ಶೈಕ್ಷಣಿಕ ಸಾಲ ಹಾಗೂ ಮನೆ ಸಾಲ ನೀಡುವ ಪ್ರಮಾಣ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಕಳೆದ ತ್ರೈಮಾಸಿಕದ ವರದಿ ಮಂಡಿಸಿದ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಲೀನಾ ಪಿಂಟೋ, ಜಿಲ್ಲೆಯಲ್ಲಿ ೩ನೇ ತ್ರೈಮಾಸಿಕ ಅವಧಿಯಲ್ಲಿ ಠೇವಣಿ ಸಂಗ್ರಹ ೩೧೦೪೫ ಕೋಟಿ ರೂ. ಏರಿ ಶೇ. ೧೦.೭೦ ಬೆಳವಣಿಗೆ ಕಂಡಿದೆ. ಅದೇ ರೀತಿ ಈ ಅವಧಿಯಲ್ಲಿ  ೧೪,೬೬೦ ಕೋಟಿ ರೂ. ಸಾಲ ವಿತರಿಸಿ, ಶೇ.೧೨.೬೧ಬೆಳವಣಿಗೆ ದಾಖಲಿಸಲಾಗಿದೆ. ಹೀಗಾಗಿ ಸಾಲ ಮತ್ತು ಠೇವಣಿ ಅನುಪಾತ ಶೇ. ೪೭.೨೨ ಆಗಿದೆ ಎಂದರು.

ಈ ಅವಧಿಯಲ್ಲಿ ಕೃಷಿ ವಲಯಕ್ಕೆ ೨೪೯೮ ಕೋಟಿ ರೂ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ೨೧೮೧ ಕೋಟಿ ರೂ, ವಿದ್ಯಾಭ್ಯಾಸ ಸಾಲ ೮೫ ಕೋಟಿ, ವಸತಿ ಸಾಲ ೪೩೪ ಕೋಟಿ ರೂ ವಿತರಿಸಲಾಗಿದೆ. ಒಟ್ಟಾರೆಯಾಗಿ ಆದ್ಯತಾ ವಲಯಕ್ಕೆ ೫೬೫೫ ಕೋಟಿ ರೂ ಹಾಗೂ ಆದ್ಯತೇತರ ವಲಯಕ್ಕೆ ೩೧೨೪ ಕೋಟಿ ರೂ ಸಾಲ ವಿತರಿಸಲಾಗಿದೆ. ದುರ್ಬಲ ವರ್ಗದ  ೮೯೭೨೦ ಮಂದಿಗೆ ೩೨೫೦ ಕೋಟಿ ರೂ ಮತ್ತು ಅಲ್ಪ ಸಂಖ್ಯಾತ ವರ್ಗದ ೩೭೨೬೧ ಮಂದಿಗೆ ೧೪೧೨ ಕೋಟಿ ರೂ ವಿತರಿಸಲಾಗಿದೆ ಎಂದರು

ಇದೇ ಸಂದರ್ಭದಲ್ಲಿ ೨೦೨೨-೨೩ನೇ ಸಾಲಿನ ಜಿಲ್ಲಾ ಸಾಲ ಯೋಜನಾ ವರದಿಯನ್ನು ಸಿಇಓ ಅವರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ನಬಾರ್ಡ್‌ನ ಎಜಿಎಂ ಸಂಗೀತಾ ಕಾರ್ಥಾ, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಕಾಳಿ ಕೆ., ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ, ಕೆ..ಜಿ, ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಸೂರ್ಯನಾರಾಯಣ ಉಪಸ್ಥಿತರಿದ್ದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ ಅತಿಥಿಗಳನ್ನು ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿ ವಂದಿಸಿದರು. ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News