ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕನ್ನಡ ತರಗತಿ ಆಯೋಜಿಸಿ: ಉಡುಪಿ ಡಿಸಿ ಸ್ವರೂಪ ಟಿ.ಕೆ.
ಕನ್ನಡ ಜಾಗೃತಿ ಸಮಿತಿ ಸಭೆ
ಉಡುಪಿ, ಡಿ.19: ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್‌ಗಳಲ್ಲಿ ನೇಮಕ ಗೊಳ್ಳುತ್ತಿರುವ ಅಧಿಕಾರಿಗಳು ಬಹುತೇಕರು ಹೊರ ರಾಜ್ಯದವರೇ ಆಗಿರುವು ದರಿಂದ ಅವರೊಂದಿಗೆ ಸ್ಥಳೀಯ, ಗ್ರಾಮೀಣ ಬ್ಯಾಂಕ್ ಗ್ರಾಹಕರು ಸಂವಹನ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಗ್ರಾಮೀಣ ಭಾಗದ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಅದ್ದರಿಂದ ಜಿಲ್ಲೆಯ ಕನ್ನಡೇತರ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕನ್ನಡ ಕಲಿಸುವ ತರಗತಿಗಳನ್ನು ಆಯೋಜಿಸ ಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಶುಕ್ರವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಇದರೊಂದಿಗೆ ಅವರಿಗೆ ಬ್ಯಾಂಕಿನ ಗ್ರಾಹಕರೊಂದಿಗೆ ಸಂಯಮ, ಸೌಜನ್ಯ ಹಾಗೂ ತಾಳ್ಮೆಯಿಂದ ವರ್ತಿಸುವಂತೆ ಭಾಷಾ ಕೌಶಲ್ಯ ವನ್ನು ಸಹ ತಿಳಿಸಿಕೊಡಬೇಕಿದೆ ಎಂದರು.
ಆಸ್ಪತ್ರೆಗಳಲ್ಲಿ ವೈದ್ಯರು ನೀಡುವ ಚೀಟಿಗಳಲ್ಲಿ ರೋಗಿಗಳ ಹೆಸರುಗಳನ್ನು ಕನ್ನಡ ಭಾಷೆಯಲ್ಲಿ ನಮೂದಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಈ ನಾಡ ನುಡಿಯಾದ ಕನ್ನಡ ಭಾಷೆಯನ್ನು ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಖಾಸಗಿ, ವಾಣಿಜ್ಯ ಹಾಗೂ ಇತರೆ ಸಂಸ್ಥೆಗಳು ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಬಳಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಮಾತೃಭಾಷೆ ಕನ್ನಡದ ಬಗ್ಗೆ ಅಭಿಮಾನ ಹೊಂದಿ, ದೈನಂದಿನ ಕಾರ್ಯಗಳಲ್ಲಿ ಅದನ್ನೇ ಹೆಚ್ಚಾಗಿ ಬಳಸಬೇಕು. ಜಿಲ್ಲೆಯಲ್ಲಿ ಉದ್ಯೋಗ ಅರಸಿ ಬರುವ ಹೊರ ರಾಜ್ಯಗಳ ಅನ್ಯಭಾಷಿಕರಿಗೂ ಸಹ ನಮ್ಮ ಭಾಷೆಯನ್ನು ಕಲಿಯಲು ಉತ್ತೇಜಿಸಬೇಕು ಎಂದು ಸ್ವರೂಪ ಟಿ.ಕೆ. ಹೇಳಿದರು.
ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಯ ಆಡಳಿತದಲ್ಲಿ ಕನ್ನಡ ಬಳಸಬೇಕು. ಆಡಳಿತದಲ್ಲಿ ಕನ್ನಡ ತಂತ್ರಾಶದ ಬಳಕೆ ಯನ್ನು ಅಳವಡಿಸಿಕೊಳ್ಳಬೇಕು. ರಾಜ್ಯದ ಸರಕಾರಿ ಕಚೇರಿಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಅಂಗಡಿ, ಹೋಟೆಲ್, ಶಾಲಾ-ಕಾಲೇಜು, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಕಡೆಗಳಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂಬ ನಿಯಮವಿದೆ. ಇದನ್ನು ಉಲ್ಲಂಘಿಸಿದಲ್ಲಿ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.
ಕನ್ನಡ ಭಾಷೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆಗಳು ಹಾಗೂ ಸರಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಖ್ಯಾತ ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡ ಉಳಿಸಲು ಹೋರಾಟ ನಡೆಸಿದ ಹೋರಾಟಗಾರರ ಕುರಿತು ನಾಟಕಗಳು, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಿದ್ದಲ್ಲಿ, ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಉತ್ಸಾಹ ತಾಳಿ ಭಾಗವಹಿಸಲಿದ್ದಾರೆ. ಈ ಮೂಲಕ ಕನ್ನಡ ಭಾಷೆ ಉಳಿವಿಗೆ ಪ್ರಯತ್ನಿಸಬಹುದು ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾದ ಊರುಗಳ ದೂರಫಲಕಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯ ಮಾಹಿತಿಗೆ ಪರಸ್ಪರ ಹೊಂದಾಣಿಕೆ ಇಲ್ಲದೆ ಗೊಂದಲ ಉಂಟಾಗುತ್ತಿದೆ. ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದ ಸ್ವರೂಪ ಟಿ.ಕೆ., ನಮ್ಮ ಮಾತೃಭಾಷೆಯ ಮೇಲೆ ಪ್ರತಿಯೊಬ್ಬರಲ್ಲೂ ಒಲವು ಇರಬೇಕು. ಆಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಲು ಸಾಧ್ಯ.ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಕನ್ನಡ ಭಾಷೆ, ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು. ಶತಮಾನ ಕಂಡ ಶಾಲೆಗಳು ಜಿಲ್ಲೆಯಲ್ಲಿ ಸಾಕಷ್ಟು ಇವೆ. ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಅಗತ್ಯ ಮೂಲಭೂತ ಸೌಕರ್ಯ, ಗ್ರಂಥಾಲಯ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಿ, ಮಕ್ಕಳಲ್ಲಿ ಕನ್ನಡ ಶಾಲೆಯ ಬಗ್ಗೆ ಒಲವು ಮೂಡಿಸಬೇಕು ಎಂದರು.
ಸಭೆಯಲ್ಲಿ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಮುಸ್ತಾಕ ಹೆನ್ನಾಬೈಲ್, ಅವಿನಾಶ್ ಕಾಮತ್, ಗಣೇಶ್ ಮೆಂಡನ್, ವಾಸುದೇವ ಗಂಗೇರ ಹಾಗೂ ಜಮಾಲ್ ಎ, ಪೌರಾಯುಕ್ತ ಮಹಾಂತೇಶ ಹಂಗರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿದ್ದರು.
‘ಶಾಲೆಗಳಲ್ಲಿ ಕನ್ನಡ ಕಲಿಕೆ ಬಗ್ಗೆ ಪರಿಶೀಲಿಸಿ’
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಕೆಲವು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಮಾತನಾಡುವ ಮಕ್ಕಳ ಮೇಲೆ ದಂಡ ವಿಧಿಸಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಆಂಗ್ಲಮಾಧ್ಯಮದಲ್ಲಿ ವ್ಯಾಸಂಗ ಮಾಡುವುದರಿಂದ ಉದ್ಯೋಗದ ವೇಳೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬ ಮನೋಭಾವ ವನ್ನು ಹೋಗಲಾಡಿಸಲು ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದ್ವಿ-ಭಾಷಾ ನೀತಿಯನ್ನು ಅನುಷ್ಠಾನ ಮಾಡಿಲಾಗಿದೆ. ಕರಕುಶಲ ಕಲೆ, ನಾಟಕ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಒಲವು ಮೂಡಿಸಬೇಕು ಎಂದು ಸ್ವರೂಪ ಟಿ.ಕೆ. ಸಲಹೆ ನೀಡಿದರು.