ನಾನೊಬ್ಬ ಲಿಂಗಾಯತ, ಹಿಂದೂ ಅಲ್ಲ ಅಂತ ಘೋಷಿಸುತ್ತಿದ್ದೇನೆ: ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ

Update: 2022-03-31 19:02 GMT

ಬೆಂಗಳೂರು, ಮಾ.31: 'ಹಿಂದೂ ಎನ್ನುವುದು ಬಹಳ ಅಪಾಯಕಾರಿ ಶಬ್ದ. ಹಿಂದೂ ಎಂಬ ಪದದಿಂದ ದೇಶದಲ್ಲಿ ಅಪಾಯ ಸೃಷ್ಟಿಯಾಗುತ್ತಿದೆ. ನಾನು ಹಿಂದೂ ಅಲ್ಲ ಅಂತ ಇವತ್ತು ಘೋಷಿಸುತ್ತಿದ್ದೇನೆ' ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. 

ಲೋಕನಾಯಕ ಜೆಪಿ ವಿಚಾರ ವೇದಿಕೆಯು ನಗರದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಸರ್ವಜನಾಂಗದ ಶಾಂತಿಯ ತೋಟ ಎಂಬ ಭಾವೈಕ್ಯತೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,. ನಾನೊಬ್ಬ ಲಿಂಗಾಯತ. ನಾನು ಹಿಂದೂ ಅಲ್ಲ, ಬಸವಣ್ಣನ ಅನುಯಾಯಿ. ಹಿಂದೂಗಳು ಬಹುಸಂಖ್ಯಾತರು ಎನ್ನುವುದು ಸರಿಯಲ್ಲ. ದೇಶದಲ್ಲಿ 20 ಕೋಟಿ ಮುಸ್ಲಿಮರು, ಸಿಖ್ಖರು ಇದ್ದಾರೆ ಎಂದು ಅವರು ಸರ್ವಜನಾಂಗದ ಶಾಂತಿಯ ತೋಟ ಕಾರ್ಯಕ್ರಮದಲ್ಲಿ ತಿಳಿಸಿದರು.

ಮುಸ್ಲಿಮರು ವ್ಯವಹಾರ ಮಾಡಬಾರದು ಎಂದರೆ ಅವರು ಎಲ್ಲಿಗೆ ಹೋಗಬೇಕು? ಬೆಂಗಳೂರಲ್ಲಿ ಕಸ ಹೊಡೆಯುವವರು ಕನ್ನಡೇತರ ಬಡವರು. ಇವೆಲ್ಲ ಸರ್ವಾಧಿಕಾರಿ ಶಕ್ತಿಗಳ ಮೊದಲನೇ ಹೆಜ್ಜೆಗಳು. ಸರ್ವಾಧಿಕಾರಿ ಶಕ್ತಿಗಳನ್ನ ನಾವು ಪ್ರತಿಭಟಿಸಿ ತಡೆಯಬೇಕು. ವರ್ತಮಾನದಲ್ಲಿ ಬದುಕುತ್ತಿಲ್ಲ, ಭೂತಕಾಲಕ್ಕೆ ಹೋಗುತ್ತಿದ್ದೇವೆ. ಇವತ್ತು ಬೀದಿಗಿಳಿದು ಹೋರಾಟ ಮಾಡುತ್ತಿರುವವರೆಲ್ಲ ಮೇಲ್ವರ್ಗದವರಲ್ಲ, ಶೂದ್ರ ಯುವಕರು, ಅವರನ್ನು ವಾಪಸ್ ಕರೆತರಬೇಕು ಎಂದು ಸಲಹೆ ಮಾಡಿದರು.

ಹಲಾಲ್ ಒಂದು ಸಮಸ್ಯೆಯೇ ಎಂದು ಪ್ರಶ್ನಿಸಿದ ಅವರು, ಹಿಜಾಬ್ ಒಂದು ವಸ್ತ್ರ ಅಷ್ಟೇ ಎಂದು ವಿಶ್ಲೇಷಿಸಿದರು. ಹಿಜಾಬ್ ಗಲಾಟೆ ಆದ ಕಾಲೇಜಲ್ಲಿ ಜನವರಿ ಮೊದಲ ವಾರ ನಾನು ಭಾಷಣ ಮಾಡಿದ್ದೆ. ಆಗ ಏನೂ ಗೊಂದಲ ಇರಲಿಲ್ಲ. ಆಮೇಲೆ ಏಕಾಏಕಿ ಇಡೀ ರಾಜ್ಯ-ರಾಷ್ಟ್ರಕ್ಕೆ ಹಬ್ಬಿತು ಎಂದರು.

ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಸ್ವಾರ್ಥ ಪ್ರತಿಷ್ಠೆ ಗಳನ್ನು ಬದಿಗೊತ್ತಿ ಜನಸೇವೆಗೆ ಆದ್ಯತೆ ನೀಡಬೇಕು. ನಿಸ್ವಾರ್ಥದ ಕೊಡುಗೆ ನೀಡುವ ಕೆಲಸಗಳನ್ನು ಮಾಡಿದರೆ ಶಾಂತಿ ನೆಲೆಸುತ್ತದೆ. ಎಲ್ಲರೂ ಒಂದಾಗಿ ಐಕ್ಯತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಧಾರ್ಮಿಕ ಮುಖಂಡರಾದ ಮುಕ್ತಿ ಮಹಮ್ಮದ್ ಆಲಿ ನಿಸ್ಸಾಹಿ ಜಮಾಲಿ, ಡಾ.ಸಿವಿಲ್ ವಿಕ್ಟರ್, ಪತ್ರಕರ್ತ ಬಿ.ಎಂ.ಹನೀಫ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News