×
Ad

ಎ.2ರಂದು ಉಪ್ಪಿನಂಗಡಿಯಲ್ಲಿ 36ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳ

Update: 2022-03-31 21:15 IST

ಪುತ್ತೂರು: ಉಪ್ಪಿನಂಗಡಿ ಕೂಟೇಲು ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯುವ, 36ನೇ ವರ್ಷದ ಹೊನಲು ಬೆಳಕಿನ ವಿಜಯ- ವಿಕ್ರಮ ಜೋಡುಕರೆ ಕಂಬಳ ಎ.2ರಂದು ನಡೆಯುವುದು. ಕಂಬಳವನ್ನು ಅದ್ಧೂರಿಯಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಸುಮಾರು 170ರಷ್ಟು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೆ.ಎಸ್. ಕೋಡಿಂಬಾಡಿ ಅವರು ತಿಳಿಸಿದರು.

ಗುರುವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿಂದ ಕೋಣಗಳು, ಕೋಣಗಳ ಯಜಮಾನರ ಸಹಿತ ಬ್ಯಾಂಡ್ ವಾಲಗ, ಗೊಂಬೆ ಕುಣಿತಗಳೊಂದಿಗೆ ಕಂಬಳ ಗದ್ದೆಯ ತನಕ ಆಕರ್ಷಕ ಮೆರವಣಿಗೆ ನಡೆಯುವುದು. ಬಳಿಕ   9.32ಕ್ಕೆ ಕಂಬಳದ ಉದ್ಘಾಟನೆ ನಡೆಯುವುದು.  ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಅವರು ಉದ್ಘಾಟಿಸುವರು ಎಂದರು.

ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆ ವಹಿಸುವರು. ರಾಜ್ಯ ಪ್ರವಾಸೋದ್ಯಮ ಖಾತೆಯ ಸಚಿವ ಆನಂದ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಜನಾರ್ಧನ ರೆಡ್ಡಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮತ್ತಿತರರು ಭಾಗವಹಿಸಲಿದ್ದಾರೆ.

ಗುಜರಾತ್‍ನ ಬರೋಡಾ ತುಳು ಸಂಘದ ಅಧ್ಯಕ್ಷ, ಮೂರೂವರೆ ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿರುವ ಸಮಾಜ ಸೇವಕ ಶಶಿಧರ ಶೆಟ್ಟಿ ಅವರನ್ನು  ಸನ್ಮಾನಿಸಲಾಗುವುದು. ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ, ಕುಸಲ್ದರಸೆ ನವೀನ್ ಡಿ. ಪಡೀಲ್, ನವರಸ ರಾಜೆ ಭೋಜರಾಜ ವಾಮಂಜೂರು, ನಟಿ ನಿರೀಕ್ಷಾ ಶೆಟ್ಟಿ ಮತ್ತಿತರರು ವಿಶೇಷ ಅತಿಥಿಗಳಾಗಿ ಭಾಗವಹಿಸುವರು ಎಂದರು.

ನೇಗಿಲು ಕಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ಹಗ್ಗ ಹಿರಿಯ, ಅಡ್ಡ ಹಲಗೆ ಮತ್ತು ಕನೆ ಹಲಗೆ ವಿಭಾಗದಲ್ಲಿ ಕಂಬಳ ನಡೆಯುವುದು. 24 ಗಂಟೆಯೊಳಗೆ ಕಂಬಳ ಮುಗಿಸಲು ಕೆಲವೊಂದು ನಿಯಮಗಳನ್ನು ಕೈಗೊಳ್ಳಲಾಗುವುದು. ಸುಮಾರು 40 ಸಾವಿರ ಮಂದಿ ಕಂಬಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಕುಳಿತುಕೊಂಡು ಕಂಬಳ ವೀಕ್ಷಿಸಲು ಅನುಕೂಲವಾಗುವಂತೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ,  ಕಾರ್ಯಾಧ್ಯಕ್ಷ ಅಶೋಕ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News