ಮೀನುಗಾರಿಕಾ ಬೋಟು ಮುಳುಗಡೆ: ಐದು ಮಂದಿಯ ರಕ್ಷಣೆ

Update: 2022-04-02 10:22 GMT

ಗಂಗೊಳ್ಳಿ : ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟೊಂದು ಗಾಳಿಯ ಅಬ್ಬರ ಹಾಗೂ ಅಲೆಗಳ ಒತ್ತಡಕ್ಕೆ ಮುಳುಗಡೆ ಗೊಂಡಿದ್ದು, ಅದರಲ್ಲಿದ್ದ ಐದು ಮಂದಿಯನ್ನು ರಕ್ಷಿಸಲಾಗಿದೆ.

ಉದ್ಯಾವರ ಸಂಪಿಗೆನಗರದ ಮುಹಮ್ಮದ್ ಹನೀಫ್ ಎಂಬವರ ‘ಮನಾಲ್’ ಹೆಸರಿನ ಬೋಟು ಮಾ.29ರಂದು ಮಧ್ಯಾಹ್ನ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದು, ಮಾ.30ರಂದು ಮಧ್ಯರಾತ್ರಿ ಗಂಗೊಳ್ಳಿ ಯಿಂದ ನೇರ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಗಾಳಿಯ ಅಬ್ಬರಕ್ಕೆ ಸಮುದ್ರದ ಅಲೆಗಳ ಒತ್ತಡಕ್ಕೆ ಇಂಜಿನ್ ಕೆಳಭಾಗದ ಪೈಬಲ್ ಶೀಟ್ ಒಡೆಯಿತ್ತೆನ್ನಲಾಗಿದೆ.

ಇದರಿಂದ ನೀರು ಬೋಟಿನೊಳಗೆ ನುಗ್ಗಲು ಪ್ರಾರಂಭವಾಯಿತು. ಕೂಡಲೇ ಹತ್ತಿರದಲ್ಲಿದ್ದ ರಾಜರಕ್ಷಾ ಬೋಟಿನವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ‘ರಾಜರಕ್ಷಾ’ ಬೋಟಿನವರು ಮುಳುಗಡೆಯಾಗುತ್ತಿದ್ದ ಬೋಟಿನಲ್ಲಿದ್ದ ತಾಂಡೇಲಾ ನಾಗಪ್ಪ ರಾಮ ಅಂಬಿಗ, ಕಲಾಸಿಯವರಾದ ಸಚಿನ್ ಉಲ್ಲಾಸ, ದೀಪಕ್ ಖಾರ್ವಿ, ಸುಭಾಷ್ ಗಾಂಗೇಶ್ವರ, ಸೂರಜ್ ಕುಮಾರ್ ಭಗತ್ ಅವರನ್ನು ರಕ್ಷಿಸಿದರು.

ಆದರೆ ಬೋಟನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೋಟು ಮುಳುಗಡೆಯಾಗಿರುವುದರಿಂದ ಸುಮಾರು 45 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News